ಮುಂಬೈ: ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದಿಂದಾಗಿ ಶ್ರೀಲಂಕಾದಲ್ಲಿ ನಡೆಯಬೇಕಿದ್ದ ಭಾರತ-ಶ್ರೀಲಂಕಾ ತಂಡಗಳ ನಡುವಿನ ಕ್ರಿಕೆಟ್ ಸರಣಿ ರದ್ದಾಗಿದೆ.
ಈ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಕೊರೋನಾ ಸಾಂಕ್ರಾಮಿಕದಿಂದಾಗಿ ಶ್ರೀಲಂಕಾದಲ್ಲಿ ನಡೆಯಬೇಕಿದ್ದ ಭಾರತ-ಶ್ರೀಲಂಕಾ ತಂಡಗಳ ನಡುವಿನ ಕ್ರಿಕೆಟ್ ಸರಣಿಯನ್ನು ರದ್ದು ಮಾಡಲಾಗಿದೆ ಎಂದು ಹೇಳಿದೆ.
ಇದೇ ವಿಚಾರವನ್ನು ಶ್ರೀಲಂಕಾ ಕ್ರಿಕೆಟ್ ಮಂಡಳಿ ಕೂಡ ಸ್ಪಷ್ಟಪಡಿಸಿದೆ. ಶ್ರೀಲಂಕಾ ಪ್ರವಾಸ ಕೈಗೊಳ್ಳಬೇಕಿದ್ದ ಭಾರತ ತಂಡ ಅಲ್ಲಿ ಮೂರು ಏಕದಿನ, ಮೂರು ಟಿ20 ಪಂದ್ಯಗಳನ್ನು ಆಡಬೇಕಿತ್ತು. ಆದರೆ ಅಂತಿಮವಾಗಿ ಸರಣಿ ರದ್ದಾಗಿದೆ. ಈ ಹಿಂದೆಯೇ ಬಿಸಿಸಿಐ ಈ ಬಗ್ಗೆ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಗೆ ಮಾಹಿತಿ ನೀಡಿತ್ತು. ಕೊರೋನಾ ವೈರಸ್ ನಿಂದಾಗಿ ಭಾರತೀಯ ಕ್ರಿಕೆಟಿಗರು ಲಂಕಾ ಪ್ರವಾಸ ಕೈಗೊಳ್ಳುವುದು ಅನುಮಾನ. ಈ ಬಗ್ಗೆ ಭಾರತ ಸರ್ಕಾರ ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿತ್ತು.
ಇನ್ನು ಮಾರಕ ಕೊರೋನಾ ವೈರಸ್ ಗೆ ಶ್ರೀಲಂಕಾ ಕೂಡ ತತ್ತರಿಸಿದ್ದು, ಲಂಕಾದಲ್ಲಿ ಸೋಂಕಿತರ ಸಂಖ್ಯೆ 1,873ಕ್ಕೆ ಏರಿಕೆಯಾಗಿದೆ. ಅಂತೆಯೇ 11 ಸಾವುಗಳು ಸಂಭವಿಸಿದೆ. ಲಂಕಾದಲ್ಲಿ ಲಾಕ್ ಡೌನ್ ಸಡಿಲಿಕೆಯಾಗಿದೆಯಾದರೂ ದೇಶಾದ್ಯಂತ ರಾತ್ರಿ ವೇಳೆಯ ಕರ್ಫ್ಯೂ ಜಾರಿಯಲ್ಲಿದೆ.
Follow us on Social media