ಬೆಂಗಳೂರು : ಕೊರೋನಾ ವೈರಸ್ ಬಗ್ಗೆ ಸಾರ್ವಜನಿಕರು ಯಾವುದೇ ರೀತಿಯ ಆತಂಕಕ್ಕೊಳಗಾಗಬಾರದು. ಅಗತ್ಯ ವೈದ್ಯಕೀಯ ನೆರವಿಗೆ ಸರ್ಕಾರ ಎಲ್ಲ ರೀತಿಯಲ್ಲೂ ಸಜ್ಜಾಗಿದ್ದು, ಮುಂಜಾಗ್ರತಾ ಕ್ರಮಗಳಿಗೆ ಸಾರ್ವಜನಿಕರು ಕೈಜೋಡಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮನವಿ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ವೈರಸ್ ಕುರಿತ ಊಹಾಪೋಹಾಗಳಿಂದ ಜನತೆ ಭಯಭೀತರಾಗಬಾರದು. ಸರ್ಕಾರ ಎಲ್ಲಾ ರೀತಿಯಿಂದಲೂ ವೈರಸ್ ತಡೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಜನತೆಗೆ ಅಭಯ ನೀಡಿದ್ದಾರೆ.
ಆರೋಗ್ಯ ಸಚಿವ ಬಿ. ಶ್ರೀರಾಮುಲು ತನ್ನ ಟ್ವೀಟ್‌ನಲ್ಲಿ ಕೋವಿಡ್-೧೯ ಸೋಂಕಿತ ವ್ಯಕ್ತಿಯ ಬೆಂಗಳೂರಿನ ನಿವಾಸ ಹಾಗೂ ಕಚೇರಿಯನ್ನು ಸೋಂಕು ಹರಡದಂತೆ ಮಂಗಳವಾರ ಸ್ವಚ್ಛಗೊಳಿಸಲಾಗಿದೆ. ಈತ ಕೆಲಸ ಮಾಡುತ್ತಿದ್ದ ಕಚೇರಿಯ ೨೫ ಸಹೋದ್ಯೋಗಿಗಳನ್ನು ಸಂಪರ್ಕಿಸಿ, ಪ್ರತಿಯೊಬ್ಬರನ್ನು ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆಗೆ ದಾಖಲಿಸಿ, ರಕ್ತದ ಮಾದರಿಯನ್ನು ಪ್ರಯೋಗಾಲಯದ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.
Source : UNI