ಚಿಕ್ಕಮಗಳುರು: ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ ಸಿಟಿ ರವಿ ಅವರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು ಅವರು ಭಾನುವಾರ ಮೂರನೇ ಬಾರಿಗೆ ಕೊರೋನಾ ಟೆಸ್ಟ್ ಮಾಡಿಸಿಕೊಂಡಿದ್ದಾರೆ.
ಈ ಕುರಿತು ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿರುವ ಸಚಿವರು “ಒಂದು ವಾರದೊಳಗಿನ ಎರಡು ಟೆಸ್ಟ್ನಲ್ಲಿ ಒಮ್ಮೆ ನೆಗೆಟಿವ್, ಒಮ್ಮೆ ಪಾಸಿಟಿವ್ ಬಂದಿದೆ, ಅದಕ್ಕಾಗಿ ನಾನು ಇಂದು 3ನೇ ಟೆಸ್ಟ್ ಮಾಡಿಸಿದ್ದೇನೆ. ಥರ್ಡ್ ಅಂಪೈರ್ ರಿಸಲ್ಟ್-ಗಾಗಿ ಕಾಯುತ್ತಿದ್ದೇನೆ” ಎಂದಿದ್ದಾರೆ.
ಇದಲ್ಲದೆ “ಬೆಳಿಗ್ಗೆ ಸೂರ್ಯ ನಮಸ್ಕಾರ, ಅರ್ಧಕಟಿ ಚಕ್ರಾಸನ, ನಾಡಿಶುದ್ದಿ ಕ್ರಿಯೆಗಳು, ಅನುಲೋಮ ವಿಲೋಮ ಪ್ರಾಣಾಯಾಮ ಪೂರ್ಣಗೊಳಿಸಿದ್ದೇನೆ. ಒಂದು ಗಂಟೆಯ ವಿವಿಧ ಯೋಗಾಭ್ಯಾಸದ ನಂತರ 10 ನಿಮಿಷ ಶವಾಸನ ಹಾಕಿದ್ದೇನೆ. ಮೇಲ್ನೋಟಕ್ಕೆ ಯಾವುದೇ ವ್ಯತ್ಯಾಸ ನನಗೆ ಗೊತ್ತಾಗಿಲ್ಲ” ಎಂದೂ ಹೇಳಿಕೊಂಡಿದ್ದಾರೆ.
ಇದಕ್ಕೆ ಹಿಂದೆ ತಮಗೆ ಕೊರೋನಾ ದೃಢಪಟ್ಟಿರುವ ಬಗ್ಗೆ ಟ್ವೀಟ್ ಮಾಡಿದ್ದ ಸಚಿವ ಸಿಟಿ ರವಿ , ”ನಾನು ಕ್ಷೇಮವಗಿದ್ದೇನೆ. ಕೊರೋನಾ ಲಕ್ಷಣಗಳಿಲ್ಲ. ಈಗ ಹೋಮ್ ಕ್ವಾರಂಟೈನ್-ನಲ್ಲಿ ಇದ್ದೇನೆ. ಸದ್ಯ ನನ್ನ ತೋಟದ ಮನೆಯಲ್ಲೇ ವಾಕ್ ಮಾಡುತ್ತಿದ್ದೇನೆ” ಎಂದು ಹೇಳಿದ್ದರು.
Follow us on Social media