Breaking News

ಕೊರೋನಾ ಎಫೆಕ್ಟ್: ಸ್ಟೇಡಿಯಂಗಳನ್ನು ಕ್ವಾರಂಟೈನ್ ಕೇಂದ್ರಗಳನ್ನಾಗಿಸಲು ರಾಜ್ಯ ಸರ್ಕಾರ ನಿರ್ಧಾರ

ಬೆಂಗಳೂರು : ಕೇಂದ್ರ ಸರ್ಕಾರ ಲಾಕ್’ಡೌನ್ ಸಡಿಲಗೊಳಿಸಿದ ಬಳಿಕ ವಿದೇಶದಲ್ಲಿರುವ ನೂರಾರು ಭಾರತೀಯರು ತಮ್ಮ ತಮ್ಮ ತವರು ರಾಜ್ಯಗಳಿಗೆ ಆಗಮಿಸುತ್ತಿದ್ದು, ಈ ವೇಳೆ ಕೊರೋನಾ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ರಾಜ್ಯ ಸರ್ಕಾರ ಇದೀಗ ರಾಜ್ಯದಲ್ಲಿರುವ ಸ್ಟೇಡಿಯಂಗಳನ್ನು ಕ್ವಾರಂಟೈನ್ ಕೇಂದ್ರಗಳನ್ನಾಗಿ ಮಾರ್ಪಡಿಸಲು ಚಿಂತನೆ ನಡೆಸುತ್ತಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 

ಈ ಬಗ್ಗೆ ಇನ್ನೂ ರಾಜ್ಯ ಸರ್ಕಾರ ಸ್ಟೇಡಿಯಂ ಗಳಿಗೆ ಅಧಿಕೃತವಾಗಿ ಯಾವುದೇ ರೀತಿಯ ಆದೇಶಗಳನ್ನು ನೀಡಿಲ್ಲ. ಆದರೆ, ಸರ್ಕಾರ ಈ ಬಗ್ಗೆ ಪ್ರಸ್ತಾಪ ಮುಂದಿಟ್ಟರೂ ಕೂಡ ಸ್ಟೇಡಿಯಂಗಳನ್ನು ಕ್ವಾರಂಟೈನ್ ಕೇಂದ್ರಗಳನ್ನಾಗಿ ಮಾರ್ಪಡಿಸಲು ಸ್ಟೇಡಿಯಂ ಮಾಲೀಕರು ಬೆಂಬಲ ನೀಡಲು ಸಿದ್ಧವಿದ್ದೇವೆಂದು ಹೇಳಿದ್ದಾರೆ. 

ಪ್ರವಾಸಿಗರಾಗಿ ಹೋಗಿರುವವರು, ವಿದ್ಯಾರ್ಥಿಗಳು, ವಲಸಿಗರು, ವೃತ್ತಿಪರರು, ಹಡಗು ಸಿಬ್ಬಂದಿ ಸೇರಿದಂತೆ ಸುಮಾರು 10,823 ಮಂದಿ ವಿದೇಶಗಳಲ್ಲಿ ಸಿಲುಕಿಕೊಂಡಿದ್ದು, ಇದರಲ್ಲಿ 6,100 ಮಂದಿ ತವರಿಗೆ ಆಗಮಿಸುತ್ತಿದ್ದಾರೆ. 

ಜಯದೇವ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯೋವಾಸ್ಕುಲರ್ ಸೈನ್ಸಸ್ ಅಂಡ್ ರಿಸರ್ಚ್ ನಿರ್ದೇಶಕ ಮತ್ತು ಕೋವಿಡ್ -19 ಟಾಸ್ಕ್ ಫೋರ್ಸ್ ಸದಸ್ಯ ಡಾ. ಸಿ ಎನ್ ಮಂಜುನಾಥ್ ಅವರು ಮಾತನಾಡಿ, ಚೀನಾ, ಬ್ರೆಜಿಲ್, ಯುರೋಪ್ ಹಾಗೂ ಆಸ್ಟ್ರೇಲಿಯಾ ರಾಷ್ಟ್ರಗಳಲ್ಲಿ ಈಗಾಗಲೇ ಸ್ಟೇಡಿಯಂಗಳನ್ನು ಕ್ವಾರಂಟೈನ್ ಕೇಂದ್ರಗಳನ್ನಾಗಿ ಮಾರ್ಪಡಿಸಲಾಗಿದೆ. ರಾಜ್ಯದಲ್ಲೂ ಇದೇ ರೀತಿ ಮಾಡಲು ಚಿಂತನೆಗಳು ನಡೆಯುತ್ತಿವೆ. ರಾಜ್ಯಕ್ಕೆ ಸಾಕಷ್ಟು ವಿದೇಶಿ ಪ್ರಯಾಣಿಕರು ಆಗಮಿಸುತ್ತಿದ್ದಾರೆ. ಹೀಗಾಗಿ ಅತಿಥಿ ಗೃಹಗಳು, ಕೊಠಡಿಗಳು ಸೇರಿದಂತೆ ಇನ್ನಿತರೆ ಸೌಲಭ್ಯಗಳ ವ್ಯವಸ್ಥೆ ಮಾಡಬೇಕಾಗಿದೆ. ಸ್ಟೇಡಿಯಂನ್ನು ಕ್ವಾರಂಟೈನ್ ಆಗಿ ಪರಿವರ್ತಿಸುವ ಕುರಿತು ಈ ವರೆಗೂ ಯಾವುದೇ ರೀತಿಯ ಅಂತಿಮ ನಿರ್ಧಾರಗಳನ್ನು ಕೈಗೊಳ್ಳಲಾಗಿಲ್ಲ ಎಂದು ಹೇಳಿದ್ದಾರೆ. 

ರಾಜ್ಯ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆಯ ಆಯುಕ್ತ ಪಂರಜ್ ಕುಮಾರ್ ಪಾಂಡೆ ಮಾತನಾಡಿ, ಸ್ಟೇಡಿಯಂಗಳನ್ನು ಕ್ವಾರಂಟೈನ್ ಕೇಂದ್ರಗಳನ್ನಾಗಿ ಮಾರ್ಪಡಿಸಲೇಬೇಕಾದ ಪರಿಸ್ಥಿತಿ ಎದುರಾದರೆ, ಖಂಡಿತ ಮಾಡಲಾಗುತ್ತದೆ. ಈ ಬಗ್ಗೆ ಎಲ್ಲಾ ರೀತಿಯ ನಿಯಮಗಳನ್ನು ಪಾಲನೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. 

ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಮಾತನಾಡಿ, ಅಂತರಾಷ್ಟ್ರೀಯ ಪ್ರಯಾಣಿಕರು ಸ್ವಯಂ ಶುಲ್ಕ ಪಾವತಿ ಮಾಡುವ ಮೂಲಕ ಹೋಟೆಲ್ ಗಳಲ್ಲೇ ಕ್ವಾರಂಟೈನ್ ನಲ್ಲಿದ್ದಾರೆ. ಸ್ಟೇಡಿಯಂ ಹಾಗೂ ಚೌಲ್ಟರಿಗಳನ್ನೂ ಕ್ವಾರಂಟೈನ್ ಕೇಂದ್ರಗಳನ್ನಾಗಿರುವ ಕುರಿತು ಚಿಂತನೆ ನಡೆಸಲಾಗುತ್ತದೆ. ಅದೂ ಕೂಡ ವಿದೇಶಗಳಿಂದ ಆಗಮಿಸುವವರ ಸಂಖ್ಯೆ ಹೆಚ್ಚಾದರೇ ಮಾತ್ರ ಇಂತಹ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ ಎಂದಿದ್ದಾರೆ. 

ರಾಜ್ಯ ಕ್ರಿಕೆಟ್ ಸಂಸ್ಥೆಯ ವಕ್ತಾರ ವಿನಯ್ ಮೃತ್ಯುಂಜಯ ಮಾತನಾಡಿ, ಈ ಬಗ್ಗೆ ಇನ್ನೂ ಯಾವುದೇ ರೀತಿಯ ಮಾತುಕತೆಗಳು ನಡೆದಿಲ್ಲ. ಆದರೆ, ಸರ್ಕಾರದಿಂದ ಪ್ರಸ್ತಾವನೆ ಬಂದಿದ್ದೇ ಆದರೆ, ಸಹಾಯ ಮಾಡಲು ನಾವು ಸಿದ್ಧರಿದ್ದೇವೆ. ಪ್ರಸ್ತುತ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ 30 ಕೊಠಡಿಗಳಿವೆ ಎಂದು ಹೇಳಿದ್ದಾರೆ. 

ರಾಜ್ಯ ಫುಟ್ಬಾಲ್ ಸಂಸ್ಥೆಯ ಕಾರ್ಯದರ್ಶಿ ಎಂ.ಸತ್ಯನಾರಾಯಣ ಮಾತನಾಡಿ, ಈ ಬಗ್ಗೆ ಇನ್ನೂ ಸರ್ಕಾರದಿಂದ ಯಾವುದೇ ರೀತಿಯ ಮಾಹಿತಿಗಳೂ ಬಂದಿಲ್ಲ. ಸರ್ಕಾರ ಪ್ರಸ್ತಾಪ ಮುಂದಿಟ್ಟಿದ್ದೇ ಆದರೆ, ನಾವು ಸಿದ್ಧವಿದ್ದೇವೆ. ಜರ್ಮನ್ ಟೆಂಟ್ ಗಳನ್ನು ಬಳಕೆ ಮಾಡುವ ಮೂಲಕ ಸ್ಟೇಡಿಯಂನ್ನು ಬಳಕೆ ಮಾಡಬಹುದಾಗಿದೆ. ಪ್ರಸ್ತುತ ಸ್ಟೇಡಿಯಂ ನಲ್ಲಿ ಇನ್ನೂ ಯಾವುದೇ ರೀತಿಯ ಕ್ರೀಡಾ ಚಟುವಟಿಕೆಗಳೂ ನಡೆಯುತ್ತಿಲ್ಲ. ಹೀಗಾಗಿ ಸರ್ಕಾರಕ್ಕೆ ಸಹಾಯ ಮಾಡಲು ನಾವು ಸಿದ್ಧರಿದ್ದೇವೆಂದು ಹೇಳಿದ್ದಾರೆ. 

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×