ನವದೆಹಲಿ: ದೇಶಾದ್ಯಂತ ಕೊರೋನಾ ವೈರಸ್ ಮತ್ತು ಲಾಕ್ ಡೌನ್ ನಿಂದಾಗಿ ಬಹುತೇಕ ಉದ್ಯಮ ಚಟುವಟಿಕೆ ಸ್ಥಗಿತವಾಗಿದ್ದರಿಂದ ಜಿಎಸ್ ಟಿ ಆದಾಯದಲ್ಲಿ ಶೇ. 56 ರಷ್ಟು ಇಳಿಕೆಯಾಗಿದೆ.
ಕೇಂದ್ರ ಸರ್ಕಾರದ ಮೂಲಗಳ ಪ್ರಕಾರ, ಕೊರೋನಾ ಲಾಕ್ ಡೌನ್ ನಿಂದ ಏಪ್ರಿಲ್ ತಿಂಗಳಲ್ಲಿ ಶೇ. 56 ರಷ್ಟು ಮತ್ತು ಮೇ ತಿಂಗಳಿನಲ್ಲಿ ಶೇ 42 ರಷ್ಟು ಜಿಎಸ್ ಟಿ ಆದಾಯ ಕುಸಿದಿದೆ ಎನ್ನಲಾಗಿದೆ.
ಕಳೆದ ವರ್ಷದ ಏಪ್ರಿಲ್, ಮೇ ತಿಂಗಳಲ್ಲಿ ಜಿಎಸ್ ಟಿ ಆದಾಯ 2,14,154 ಕೋಟಿ ರೂ. ಇತ್ತು. ಆದರೆ ಈ ವರ್ಷ ಸರ್ಕಾರಕ್ಕೆ ಕೇವಲ 94,323 ಕೋಟಿ ರೂಪಾಯಿ ಆದಾಯ ಸಂಗ್ರಹಣೆಯಾಗಿದೆ ಎನ್ನಲಾಗಿದೆ.
ಮಾರ್ಚ್ 25 ರಿಂದ ದೇಶಾದ್ಯಂತ ಲಾಕ್‌ಡೌನ್ ಜಾರಿಗೊಳಿಸಿದ್ದರಿಂದ ಆರ್ಥಿಕ ಚಟುವಟಿಕೆಗಳಿಗೆ ಅಡ್ಡಿಯುಂಟಾದ ಕಾರಣ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಜಿಎಸ್‌ಟಿ ಸಂಗ್ರಹದಲ್ಲಿ ತೀವ್ರ ಕುಸಿತ ನಿರೀಕ್ಷಿಸಲಾಗಿತ್ತು. ಆದರೆ ಏಪ್ರಿಲ್ ತಿಂಗಳಿಗೆ ಹೋಲಿಸಿದರೆ ಮೇ ತಿಂಗಳಲ್ಲಿ ಜಿಎಸ್‌ಟಿ ಸಂಗ್ರಹವು ಗಮನಾರ್ಹವಾಗಿ ಸುಧಾರಿಸಿದ್ದರಿಂದ ಆರ್ಥಿಕತೆಯು ಚೇತರಿಸಿಕೊಳ್ಳುತ್ತಿದೆ ಎಂದು ಹೆಸರು ಹೇಳಲು ಇಚ್ಚಿಸದ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Follow us on Social media