ಬೆಂಗಳೂರು: ಕೊರೋನಾ ನಡುವೆಯೇ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಚಿನ್ನ ಸ್ಮಗ್ಲಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಸ್ವಪ್ನ, ಸಂದೀಪ್ ನಾಯರ್ ಎಂಬುವವರನ್ನು ರಾಷ್ಟ್ರೀಯ ತನಿಖಾದಳ (ಎನ್ಐಎ) ಅಧಿಕಾರಿಗಳು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಶನಿವಾರ ಸಂಜೆ ಪ್ರಮುಖ ಆರೋಪಿ ಸ್ವಪ್ನ ಸುರೇಶ್ ಮತ್ತು ಅವರ ಕುಟುಂಬಸ್ಥರನ್ನು ಬೆಂಗಳೂರಲ್ಲಿ ರಾಷ್ಟ್ರೀಯ ತನಿಖಾ ತಂಡ( ಎನ್ಐಎ) ಅಧಿಕಾರಿಗಳು ಬಂಧಿಸಿದ್ದು, ಇದರ ಬೆನ್ನಲ್ಲೇ ಆಕೆ ನೀಡಿದ ಮಾಹಿತಿ ಮೇರೆಗೆ ಮತ್ತೋರ್ವ ಆರೋಪಿ ಸಂದೀಪ್ ನಾಯರ್ ನನ್ನೂ ಕೂಡ ಅಧಿಕಾರಿಗಳು ಬಂಧಿಸಿದ್ದಾರೆ.
ಕೇರಳದಲ್ಲಿ ಸಂಚಲನ ಮೂಡಿಸಿರುವ ಚಿನ್ನದ ಸ್ಮಗಲಿಂಗ್ ಕೇಸಿನ ಪ್ರಮುಖ ಆರೋಪಿ ಸ್ವಪ್ನ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನು ಕೇರಳ ಹೈಕೋರ್ಟ್ ಮಂಗಳವಾರಕ್ಕೆ ಮುಂದೂಡಿತ್ತು. ವಿಚಾರಣೆ ವೇಳೆ ಸ್ವಪ್ನ ಸುರೇಶ್ ಗೆ ಜಾಮೀನು ನೀಡುವುದಕ್ಕೆ ರಾಷ್ಟ್ರೀಯ ತನಿಖಾ ತಂಡ (ಎನ್ಐಎ) ಆಕ್ಷೇಪ ವ್ಯಕ್ತಪಡಿಸಿತ್ತು. ಸ್ವಪ್ನ ಪ್ರಭ ಸುರೇಶ್, ಫಾಜೀಲ್ ಫರೀದ್, ಸಂದೀಪ್ ನಾಯರ್ ಹಾಗೂ ಸರೀತ್ ಕುಮಾರ್ ಅವರ ವಿಚಾರಣೆ ಅಗತ್ಯವಾಗಿದ್ದು, ಈ ಜಾಲದಲ್ಲಿರುವ ಇನ್ನಷ್ಟು ಮಂದಿಯ ಬಗ್ಗೆ ತಿಳಿಯಬೇಕಿದೆ ಎಂದು ಎನ್ಐಎ ಪರ ವಕೀಲರು ವಾದಿಸಿದ್ದರು.
ಎಲ್ಲಾ ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ದಾಖಲಿಸಲಾಗಿದೆ. ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ಪ್ರತಿ ಕೊಡುವಂತೆ ಸ್ವಪ್ನ ಪರ ವಕೀಲರು ಮನವಿ ಮಾಡಿಕೊಂಡರು. ಆದರೆ, ಇದು ಅತ್ಯಂತ ಸೂಕ್ಷ್ಮ ಪ್ರಕರಣವಾಗಿದ್ದು, ಈ ಸಮಯದಲ್ಲಿ ಮಾಹಿತಿ ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ಎನ್ಐಎ ತಿಳಿಸಿದೆ. ನಾಲ್ಕೈದು ದಿನಗಳಿಂದ ನಾಪತ್ತೆಯಾಗಿದ್ದ ಸ್ವಪ್ನ ಆನ್ ಲೈನ್ ಮೂಲಕ ಜಾಮೀನು ಅರ್ಜಿ ಹಾಕಿದ್ದರು. ಯುಎಪಿಎ ಕಾಯ್ದೆ 1967ಉಲ್ಲಂಘನೆಯಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಇಂದು ಜಾಮೀನು ಅರ್ಜಿ ವಿಚಾರಣೆ ಸಾಧ್ಯವಿಲ್ಲ ಎಂದು ಮುಂದಿನ ಮಂಗಳವಾರಕ್ಕೆ ಮುಂದೂಡಲಾಗಿದೆ
ಏನಿದು ಪ್ರಕರಣ:
ರಾಜತಾಂತ್ರಿಕ ರಕ್ಷಣೆ ಹೊಂದಿರುವ ”ಡಿಪ್ಲೊಮ್ಯಾಟಿಕ್ ಬ್ಯಾಗೇಜ್” ನಲ್ಲಿದ್ದ 30 ಕೆಜಿ ಚಿನ್ನವನ್ನು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ತಿರುವನಂತಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶ ಪಡಿಸಿಕೊಂಡಿದ್ದರು. ಸುಮಾರು 15 ಕೋಟಿ ರೂಪಾಯಿ ಮೌಲ್ಯದ ಈ ಚಿನ್ನ ಅಕ್ರಮ ಸಾಗಣೆಯ ಆರೋಪಿ ರಾಜತಾಂತ್ರಿಕ ಕಚೇರಿಯ ಮಾಜಿ ಸಿಬ್ಬಂದಿ ಸ್ವಪ್ನ ಸುರೇಶ್ ಎಂದು ಆರೋಪಿಸಲಾಗಿದೆ. ಸ್ವಪ್ನ ಸುರೇಶ್ ಹನಿ ಟ್ರಾಪ್ ಮೂಲಕ ಅಧಿಕಾರಿಗಳ ಕಣ್ಣಿಗೆ ಮಣ್ಣೆರಚಿ ಯುಎಇ ಮೂಲಕ ಚಿನ್ನ ಸ್ಮಗ್ಲಿಂಗ್ ಮಾಡುತ್ತಿದ್ದರು ಎಂಬ ಗಂಭೀರ ಆರೋಪವಿದೆ.