ಕೋಲ್ಕತಾ : ಅವ್ಯವಸ್ಥಿತ ಲಾಕ್ ಡೌನ್ ಹೇರುವ ವಲಸೆ ಕಾರ್ಮಿಕರನ್ನು ನಿರಾಶ್ರಿತಗೊಳಿಸಿದ ಕೇಂದ್ರ ಸರ್ಕಾರಕ್ಕೆ ಅವರ ಬಗ್ಗೆ ಮಾತನಾಡುವ ಹಕ್ಕಿಲ್ಲ, ವಲಸೆ ಕಾರ್ಮಿಕರ ರವಾನೆಗಾಗಿ ಬಂಗಾಳ ಸರ್ಕಾರ 8 ರೈಲುಗಳ ಓಡಿಸಲು ಯೋಜನೆ ರೂಪಿಸಿದೆ ಎಂದು ಆಡಳಿತಾ ರೂಢ ತೃಣಮೂಲ ಕಾಂಗ್ರೆಸ್ ಪಕ್ಷ ಕೇಂದ್ರ ಸರ್ಕಾರಕ್ಕೆ ತಿರುಗೇಟು ನೀಡಿದೆ.
ವಲಸೆ ಕಾರ್ಮಿಕರ ವಿಚಾರ ಇದೀಗ ಕೇಂದ್ರ ಹಾಗೂ ಪಶ್ಚಿಮ ಬಂಗಾಳ ಸರ್ಕಾರಗಳ ನಡುವಿನ ಜಟಾಪಟಿಗೆ ಕಾರಣವಾಗಿದ್ದು, ಪಶ್ಚಿಮ ಬಂಗಾಳಕ್ಕೆ ರೈಲು ಹೋಗಲು ಬಿಡುತ್ತಿಲ್ಲ, ಇದು ಕಾರ್ಮಿಕರಿಗೆ ಮಾಡುತ್ತಿರುವ ಅನ್ಯಾಯ ಎಂದು ಆರೋಪಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಟಿಎಂಸಿ ತಿರುಗೇಟು ನೀಡಿದೆ. ಕೇಂದ್ರ ಗೃಹ ಸಚಿವರಾದ ಅಮಿತ್ ಷಾ ಮಾಡಿದ ತನ್ನ ಮೇಲಿನ ಗಂಭೀರ ಆರೋಪಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿರುಗೇಟು ನೀಡಿದ್ದು, ವಲಸೆ ಕಾರ್ಮಿಕರ ಬಗ್ಗೆ ಮಾತಾಡುವ ಹಕ್ಕು ನಿಮಗಿಲ್ಲ, ನಿನ್ನೆಯೊಂದೇ ದಿನ 16 ಮಂದಿ ರೈಲ್ವೆ ದುರಂತದಲ್ಲಿ ಬಲಿಯಾಗಿದ್ಧಾರೆ. ಹಾಗಾಗಿ ಮೊದಲು ಕೇಂದ್ರ ರೈಲ್ವೆ ಮಂತ್ರಿಯ ರಾಜೀನಾಮೆ ಪಡೆಯುವಿರಾ? ಎನ್ನುವ ಮೂಲಕ ದೀದಿ ಅಮಿತ್ ಶಾಗೆ ಬಹಿರಂಗ ಸವಾಲು ಹಾಕಿದ್ದಾರೆ.
ಅಮಿತ್ ಶಾ ಆರೋಪಕ್ಕೆ ಸಂಬಂಧಿಸಿದಂತೆ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಶ್ಚಿಮ ಬಂಗಾಳ ಸಿಎಂ ಹಾಗೂ ತೃಣಮೂಲಕ ಕಾಂಗ್ರೆಸ್ ಅಧಿನಾಯಕಿ ಮಮತಾ ಬ್ಯಾನರ್ಜಿ ಅವರು, ಪಶ್ಚಿಮ ಬಂಗಾಳ ಸರ್ಕಾರ ವಲಸೆ ಕಾರ್ಮಿಕರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದೆ. ಅವರಿಗಾಗಿ ಪಶ್ಚಿಮ ಬಂಗಾಳದಲ್ಲಿ 711 ಕ್ಯಾಂಪ್ ಗಳನ್ನು ತೆರೆಯಲಾಗಿದೆ. ವಲಸೆ ಕಾರ್ಮಿಕರ ಬಗ್ಗೆ ಸಲಹೆ ಕೊಡಲು ಕೇಂದ್ರ ಸರ್ಕಾರಕ್ಕೆ ಹಕ್ಕಿಲ್ಲ. ಕೇಂದ್ರ ಸರ್ಕಾರ ರೈಲು ಬಿಡುವ ಬಗ್ಗೆ ಬರೀ ಸುಳ್ಳು ಹೇಳುತ್ತಿದೆ ಎಂದು ವಾಗ್ದಾಳಿ ನಡೆಸಿದರು.
8 ರೈಲುಗಳು ಓಡಿಸಲು ಯೋಜನೆ
ಇನ್ನು ಬಂಗಾಳದಲ್ಲಿರುವ ವಲಸೆ ಕಾರ್ಮಿಕರ ರವಾನೆಗೆ ರಾಜ್ಯ ಸರ್ಕಾರ 8 ರೈಲುಗಳನ್ನು ಓಡಿಸಲು ಯೋಜನೆ ರೂಪಿಸಿದೆ. 16 ಕಾರ್ಮಿಕರ ಮೇಲೆ ರೈಲು ಹತ್ತಿಸಿದ ಕೇಂದ್ರ ಸರ್ಕಾರಕ್ಕೆ ಬಂಗಾಳದ ಬಗ್ಗೆ ಮಾತನಾಡುವ ಹಕ್ಕಿಲ್ಲ ಎಂದು ಟಿಎಂಸಿ ಸಂಸದ ಕಕೋಲಿ ಘೋಷ್ ದೋಸ್ತಿದಾರ್ ಹೇಳಿದ್ದಾರೆ.
ಈ ಮುನ್ನ ಮಮತಾ ಬ್ಯಾನರ್ಜಿ ವಲಸೆ ಕಾರ್ಮಿಕರು ತುಂಬಿದ್ದ ರೈಲನ್ನು ತಮ್ಮ ರಾಜ್ಯದೊಳಗೆ ಬರಲು ಬಿಡದೆ ವಲಸೆ ಕಾರ್ಮಿಕರಿಗೆ ಅನ್ಯಾಯ ಎಸಗುತ್ತಿದ್ದಾರೆ. ವಲಸೆ ಕಾರ್ಮಿಕರಿಗೆ ಸಹಾಯ ಮಾಡುವ ಸಂಬಂಧ ಪಶ್ಚಿಮ ಬಂಗಾಳ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ನಿರೀಕ್ಷಿಸಿದಷ್ಟು ಬೆಂಬಲ ಸಿಗುತ್ತಿಲ್ಲ. ಪಶ್ಚಿಮ ಬಂಗಾಳದ ವಿವಿಧ ಕಡೆಗಳಿಂದ ದೇಶದ ಹಲವು ಕಡೆಗಳಿಗೆ ಕೆಲಸಕ್ಕಾಗಿ ತೆರಳಿದ್ದ 2 ಲಕ್ಷ ವಲಸೆ ಕಾರ್ಮಿಕರು ತೆರಳಿದ್ದರು. ಇವರನ್ನು ಲಾಕ್‌ಡೌನ್ ಆದ್ದರಿಂದ ತಮ್ಮ ರಾಜ್ಯಗಳಿಗೆ ವಾಪಸ್ಸು ಕಳಿಸಲು ಕೇಂದ್ರ ಸರ್ಕಾರ ಎಲ್ಲಾ ವ್ಯವಸ್ಥೆ ಮಾಡಿದೆ. ಆದರೆ, ಪಶ್ಚಿಮ ಬಂಗಾಳ ಸರ್ಕಾರ ವಲಸೆ ಕಾರ್ಮಿಕರಿದ್ದ ರೈಲು ಪ್ರವೇಶ ನಿರ್ಬಂಧ ವಿಧಿಸಿದೆ. ಈ ಮೂಲಕ ಕಾರ್ಮಿಕರಿಗೆ ಅನ್ಯಾಯ ಮಾಡುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ದೀದಿ ವಿರುದ್ಧ ಪತ್ರದ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದರು.
Follow us on Social media