ನವದೆಹಲಿ : ಈಗಾಗಲೇ ಜಾರಿಯಲ್ಲಿರುವ ಅನ್ ಲಾಕ್-5ರ ಮಾರ್ಗಸೂಚಿಗಳಲ್ಲಿ ಯಾವುದೇ ಬದಲಾವಣೆ ತರದೆ ಆ ಮಾರ್ಗಸೂಚಿಯನ್ನೇ ನವೆಂಬರ್ 30 ರವರೆಗೆ ಕೇಂದ್ರ ಗೃಹ ಸಚಿವಾಲಯವು ಮಂಗಳವಾರ ವಿಸ್ತರಿಸಿದೆ. ಆದರೆ ಶಾಲೆ ಕಾಲೇಜುಗಳಿಗೆ ಹೊಸ ಶಿಕ್ಷಣಸಂಸ್ಥೆಗಳಿಗೆ ಮಾತ್ರ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ.
ಈ ಹೊಸ ಮಾರ್ಗಸೂಚಿಯ ಪ್ರಕಾರವಾಗಿ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಶಾಲೆಗಳು ಹಾಗೂ ಇತರ ಕಾಲೇಜುಗಳನ್ನು ಮತ್ತೆ ಆರಂಭ ಮಾಡುವ ಅಧಿಕಾರವನ್ನು ನೀಡಲಾಗಿದೆ. ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಆನ್‌ಲೈನ್ ತರಗತಿಗಳನ್ನು ಅಧಿಕಗೊಳಿಸಬಹುದಾಗಿದೆ. ಹಾಗೆಯೇ ವಿದ್ಯಾರ್ಥಿಗಳು ಶಾಲೆಗೆ ಹೋಗದಿರುವ ಆಯ್ಕೆಯನ್ನು ನೀಡಲಾಗಿದೆ.
ಇನ್ನು ವಿದ್ಯಾರ್ಥಿಗಳು ಶಾಲೆಗೆ ತೆರಳುವ ನಿರ್ಧಾರವನ್ನು ಕೈಗೊಂಡಲ್ಲಿ ಹೆತ್ತವರು ಅಥವಾ ರಕ್ಷಕರ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ವಿದ್ಯಾರ್ಥಿಗಳು ಶಾಲೆಗೆ ಹಾಜರಾಗುವುದು ಹೆತ್ತವರ ಅಥವಾ ಪೋಷಕರ ಇಚ್ಛೆಗೆ ಬಿಟ್ಟಿದ್ದು ವಿದ್ಯಾರ್ಥಿಗಳು ಶಾಲೆಗೆ ಹಾಜರಾಗುವಂತೆ ವಿದ್ಯಾ ಸಂಸ್ಥೆಗಳು ಒತ್ತಡ ಹೇರುವಂತಿಲ್ಲ ಎಂದು ಮಾರ್ಗಸೂಚಿಯನ್ನು ತಿಳಿಸಲಾಗಿದೆ.
ಇನ್ನು ಪ್ರಯೋಗ ಅಥವಾ ಲ್ಯಾಬ್ ಕಾರ್ಯ ಅವಶ್ಯವಾಗಿರುವ ವಿಜ್ಞಾನ, ಪಿಎಚ್‌ಡಿ ಅಥವಾ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಉನ್ನತ ಸಂಸ್ಥೆಯನ್ನು ತೆರೆಯಲು ಅವಕಾಶ ನೀಡಲಾಗಿದೆ.
ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು ಆಸನದ ವ್ಯವಸ್ಥೆ ಮಾಡಬೇಕು. ವಿದ್ಯಾರ್ಥಿಗಳು, ಶಿಕ್ಷಕರು ಎಲ್ಲಾ ಸಂದರ್ಭದಲ್ಲೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಹಾಗೆಯೇ ಶಾಲಾ ಆವರಣದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂದು ಮಾರ್ಗಸೂಚಿಯನ್ನು ಸೂಚಿಸಲಾಗಿದೆ.
Follow us on Social media