ಬೆಂಗಳೂರು: ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಬೇಡಿ. ಬೇಕಾದರೆ ಅವರ ಸಂಬಳ ಕಡಿತಮಾಡಿ ಎಂದು ರಾಜ್ಯ ಸರ್ಕಾರ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರದ(ಐಟಿ, ಬಿಟಿ) ಕಂಪನಿಗಳಿಗೆ ಶುಕ್ರವಾರ ಸೂಚಿಸಿದೆ.
ಐಟಿ ಕಂಪನಿಗಳು ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ಕಂಪನಿಗಳು ಕೆಲಸದಿಂದ ತೆಗೆಯಬಾರದು. ಅದರ ಬದಲು ಅವರ ಸಂಬಳದಲ್ಲಿ ಕಡಿತ ಮಾಡಲಿ. ಇದರಿಂದ ಕಂಪನಿಯ ಕಾರ್ಯನಿರ್ವಹಣೆಯ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ ಎಂದು ಮಾಹಿತಿ ತಂತ್ರಜ್ಞಾನ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ. ಸಿಎನ್ ಅಶ್ವತ್ಥನಾರಾಯಣ್ ಅವರು ಹೇಳಿದ್ದಾರೆ.
ಇಂತಹ ಆರ್ಥಿಕ ಬಿಕ್ಕಟ್ಟನ್ನು ನಿಭಾಯಿಸುವಾಗ ಅವರು(ಉದ್ಯಮ) ಪರಸ್ಪರ ಸಹಕರಿಸಬೇಕು ಮತ್ತು ಸರ್ಕಾರದ ಸಲಹೆಗಳನ್ನು ಪರಿಗಣಿಸಬೇಕು, ನಮ್ಮ ಕಾಳಜಿಯನ್ನು ಅರ್ಥಮಾಡಿಕೊಳ್ಳಬೇಕು ಎಂದು ಡಿಸಿಎಂ ಹೇಳಿದರು.
ಏಪ್ರಿಲ್ 20ರ ನಂತರ ಮಾಹಿತಿ ಐಟಿ, ಬಿಟಿ ಕ್ಷೇತ್ರದ ಶೇ. 50ರಷ್ಟು ಸಿಬ್ಬಂದಿ ಕಚೇರಿಗೆ ಹೋಗಿ ಕಾರ್ಯ ನಿರ್ವಹಿಸಲು ಅವಕಾಶ ಇರುತ್ತದೆ ಎಂದು ಅಶ್ವತ್ಥನಾರಾಯಣ ಹೇಳಿದ್ದಾರೆ.
ಐಟಿ- ಬಿಟಿ ಸಿಬ್ಬಂದಿಗೆ ಪಾಸ್, ಸಂಪರ್ಕ ಸಾರಿಗೆ ವ್ಯವಸ್ಥೆ, ಸ್ಕ್ರೀನಿಂಗ್, ಇಂಟರ್ ನೆಟ್ ವ್ಯವಸ್ಥೆ ಸೇರಿದಂತೆ ಹಲವು ಪ್ರಮುಖ ವಿಚಾರಗಳ ಕುರಿತು ಐಟಿ-ಬಿಟಿ ಮುಖ್ಯಸ್ಥರೊಂದಿಗೆ ಇಂದು ವೀಡಿಯೋ ಕಾನ್ಫರೆನ್ಸ್ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದ ಅವರು. ಯಾವುದೇ ಹೊಸ ಕೆಲಸದ ಆರ್ಡರ್ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಕಂಪನಿ ಬಾಗಿಲು ಹಾಕುವುದು ಅಥವಾ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವುದು ಸರಿ ಅಲ್ಲ. ಏಕೆಂದರೆ ಈಗ ಹೊಸ ಕೆಲಸ ಹುಡುಕಿಕೊಳ್ಳುವುದು ಕಷ್ಟವಾಗುತ್ತದೆ. ಕಂಪನಿ ನೌಕರರನ್ನು ಕೆಲಸದಿಂದ ತೆಗೆಯುವ ಬದಲು ಸಂಬಳ ಕಡಿತ ಮುಂತಾದ ಮಾರ್ಗೋಪಾಯಗಳನ್ನು ಕಂಡುಕೊಳ್ಳುವುದು ಸೂಕ್ತ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ. ಎಲ್ಲ ಕಂಪನಿಗಳು ಇದೇ ನಿಯಮ ಪಾಲಿಸಬೇಕು,”ಎಂದು ಅವರು ಹೇಳಿದರು.
Follow us on Social media