ಮಂಗಳೂರು: ಕೋವಿಡ್ ಭೀತಿಯಿಂದ ಉದ್ಯೋಗ ಕಳೆದುಕೊಳ್ಳುವ ಸಂಕಷ್ಟ ಒಂದೆಡೆಯಾಗಿದ್ದರೆ, ಇದೀಗ ಕುವೈತ್‌ನ ರಾಷ್ಟ್ರೀಯ ಅಸೆಂಬ್ಲಿಯ ಕಾನೂನು ಮತ್ತು ಸಂಸದೀಯ ಸಮಿತಿ ವಿದೇಶಿ ವಲಸೆ ಮೀಸಲಾತಿ ಮಸೂದೆಗೆ ಅಂಗೀಕಾರ ನೀಡಿದೆ. ಇದರಿಂದಾಗಿ ಎಂಟು ಲಕ್ಷ ಭಾರತೀಯರು ಕುವೈತ್ ತೊರೆಯಬೇಕಾಗಲಿದೆ ಎಂದು ಹೇಳಲಾಗುತ್ತಿದ್ದು, ಈ ಪೈಕಿ 50 ಸಾವಿರ ಜನರು ಕನ್ನಡಿಗರಾಗಿದ್ದಾರೆ.
ಅದರಲ್ಲೂ ಕರಾವಳಿ ಭಾಗದ ಉಡುಪಿ, ಉತ್ತರ ಕನ್ನಡ ಹಾಗಗೂ ದಕ್ಷಿಣ ಕನ್ನಡ ಜಿಲ್ಲೆಗಳ ಹೆಚ್ಚಿನ ಮಂದಿ ಕುವೈತ್ ನಲ್ಲಿದ್ದಾರೆ, ಹೀಗಾಗಿ ಕರಾವಳಿ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗುತ್ತಿದೆ.
ಅತಿ ಹೆಚ್ಚು ಮಂದಿ ಕುವೈತ್ ನಲ್ಲಿ ಕೆಲಸ ಮಾಡಲು ಬಸುತ್ತಾರೆ ಏಕೆಂದರೆ ಅಲ್ಲಿ ತಿಂಗಳಿಗೆ ಕನಿಷ್ಟ 35 ಸಾವಿರು ರೂ ಸಂಬಳ ಇರುತ್ತದೆ. ಹೊಸ ಮಸೂದೆ ಅಂಗೀಕಾರವಾಗಲೂ ಒಂದರಿಂದ ಎರಡು ವರ್ಷ ಸಮಯ ಬೇಕಾಗುತ್ತದೆ. ಆದರೆ ಸದ್ಯ ಅಲ್ಲಿರುವ ಆರ್ಥಿಕ ಪರಿಸ್ಥಿತಿ ಹಿನ್ನೆಲೆಯಲ್ಲಿ ಕೆಲವು ಮಂದಿ ಈಗಾಗಲೇ ಅಲ್ಲಿಂದ ತೆರಳಿದ್ದಾರೆ, ಹೀಗಾಗಿ ಅಲ್ಲಿ ಕೆಲಸದಿಂದ ತೆಗೆಯುವುದು ಸಾಮಾನ್ಯವಾಗಿದೆ ಎಂದು ಕುವೈತ್ ನಲ್ಲಿ ಕಳೆದ 15 ವರ್ಷದಿಂದ ಕೆಲಸ ಮಾಡುತ್ತಿದ್ದ ಪಾರೂಖ್ ಎಂಬುವರು ತಿಳಿಸಿದ್ದಾರೆ.
ಅವರಲ್ಲಿ ಏನಿಲ್ಲವೆಂದರೂ 50 ಸಾವಿರದಷ್ಟು ಕನ್ನಡಿಗರಿದ್ದಾರೆ. ಟೆಕ್ನೀಶಿಯನ್‌ಗಳು ಇತ್ಯಾದಿ ಕೌಶಲ್ಯಾಧಾರಿತ ಉದ್ಯೋಗದಲ್ಲಿ ಅತಿ ಹೆಚ್ಚು ಮಂದಿ ತೊಡಗಿಕೊಂಡಿದ್ದು, ಸೇಲ್ಸ್, ರಿಯಲ್ ಎಸ್ಟೇಟ್ ಕ್ಷೇತ್ರಗಳಲ್ಲೂ ಸಾವಿರಾರು ಮಂದಿ ಉದ್ಯೋಗ ಮಾಡಿಕೊಂಡಿದ್ದಾರೆ. ಭಾರತೀಯ ವೈದ್ಯರು, ಎಂಜಿನಿಯರ್‌ಗಳು ಕೂಡ ದೊಡ್ಡ ಸಂಖ್ಯೆಯಲ್ಲೇ ಇದ್ದಾರೆ. ಮಸೂದೆಯ ತೂಗುಗತ್ತಿ ಈಗ ಇವರೆಲ್ಲರ ಮೇಲೆ ಬಿದ್ದಿದ್ದು, ಸಂಕಷ್ಟಕ್ಕೆ ಸಿಲುಕಲಿದ್ದಾರೆ. 50 ಸಾವಿರ ಕನ್ನಡಿಗರು ಕುವೈತ್ ನಲ್ಲಿ ಉದ್ಯೋಗ ಮಾಡುತ್ತಿದ್ದು ಅವರನ್ನು ನಂಬಿಕೊಂಡು
20 ಸಾವಿರ ಕುಟುಂಬಗಳು ಕರ್ನಾಟಕದಲ್ಲಿ ಜೀವನ ಮಾಡುತ್ತಿವೆ.