ಕುಂದಾಪುರ: ಚಲಿಸುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಸಮುದ್ರ ಪಾಲಾಗಿ ಕಾರಿನೊಳಗಿದ್ದ ನಾಲ್ವರ ಪೈಕಿ ಚಾಲಕ ಸಾವನ್ನಪ್ಪಿದ್ದು, ಓರ್ವ ನಾಪತ್ತೆಯಾಗಿ ಇಬ್ಬರು ಪ್ರಯಾಣಿಕರು ಗಾಯಾಳುಗಳಾಗಿ ಆಸ್ಪತ್ರೆಗೆ ಸೇರಿದಂತಹ ದಾರುಣ ಘಟನೆ ಉಡುಪಿ ಕುಂದಾಪರದ ಗಂಗೊಳ್ಳಿ ಠಾಣಾ ವ್ಯಾಪ್ತಿಯ ಮರವಂತೆ ಬೀಚ್ ನ ರಾಷ್ಟ್ರೀಯ ಹೆದ್ದಾರಿ 66 ರ ಬಳಿ ನಿನ್ನೆ ತಡರಾತ್ರಿ ನಡೆದಿದೆ.
ಘಟನೆಯಲ್ಲಿ ಇಲ್ಲಿನ ಬೀಜಾಡಿಯ ಗೋಳಿಬೆಟ್ಟು ನಿವಾಸಿ ವಿಲಾಸ್ ಮಾರ್ಬಲ್ ನ ಮಾಲಕ ರಮೇಶ್ ಆಚಾರ್ ನೇರಂಬಳ್ಳಿಯವರ ಪುತ್ರ ವಿರಾಜ್ ಆಚಾರ್ಯ (28) ಮೃತಪಟ್ಟ ಕಾರು ಚಾಲಕ.ಸಹೋದರ ಸಂಬಂಧಿಗಳಾದ ಸಂದೇಶ್,ಕಾರ್ತಿಕ್ ಗಾಯಾಳಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಪೈಕಿ ರೋಶನ್ ಎಂಬವರು ನಾಪತ್ತೆಯಾಗಿದ್ದ ಪ್ರಯಾಣಿಕರಾಗಿದ್ದಾರೆ.
ಸ್ಥ ಳೀಯ ಮುಳುಗುತಜ್ಞ ದಿನೇಶ್ ಗಂಗೊಳ್ಳಿ ಮತ್ತವರ ತಂಡ, ಇಬ್ರಾಹಿಂ ಗಂಗೊಳ್ಳಿ, ಮತ್ತವರ ತಂಡ ಹಾಗೂ ಸ್ಥಳೀಯರ ನೆರವಿನಿಂದ ಪೊಲೀಸ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಇಂದು ಮುಂಜಾನೆಯಿಂದ ಮತ್ತೆ ಕಾರ್ಯಾಚರಣೆ ಆರಂಭಿಸಿ ಕಾರನ್ನು ಮೇಲಕ್ಕೆತಿದ್ದಾರೆ.
ಈ ವೇಳೆ ಸೀಟ್ ಬೆಲ್ಟ್ ಧರಿಸಿದ್ದ ಸ್ಥಿತಿಯಲ್ಲೇ ಚಾಲಕ ವಿರಾಜ್ ಅವರ ಮೃತದೇಹ ಪತ್ತೆಯಾಗಿದೆ.
ಕಾರಿನಲ್ಲಿದ್ದ ಇನ್ನೋರ್ವ ಪ್ರಯಾಣಿಕ ರೋಶನ್ ನಾಪತ್ತೆಯಾಗಿದ್ದು ಅವರ ಪತ್ತೆ ಕಾರ್ಯ ಮುಂದುವರೆದಿದ್ದು, ಸಮುದ್ರದಲ್ಲಿ ಕೊಚ್ಚಿಹೋಗಿರುವ ಶಂಕೆ ವ್ಯಕ್ತವಾಗುತ್ತಿದೆ.ತಡರಾತ್ರಿ ಕುಂದಾಪುರ ಕಡೆಯಿಂದ ಬೈಂದೂರಿನತ್ತ ಚಲಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.