ಬೆಂಗಳೂರು: ಹಸಿವಿನಲ್ಲಿದ್ದ ಬಡವರು, ವಲಸೆ ಕಾರ್ಮಿಕರಿಗೆ ಆಹಾರ ಹಂಚುತ್ತಿದ್ದ ಜರೀನ್ ತಾಜ್ ಮತ್ತು ಅವರ ಜೊತೆಗಾರರ ಮೇಲೆ ದಾಳಿ ಮಾಡಿದ ಹಿನ್ನೆಲೆಯಲ್ಲಿ ಸಾಹಿತಿ, ಬರಹಗಾರ ದೇವನೂರ ಮಹಾದೇವ ಅವರು ತಾಜ್ ಅವರಿಗೆ ಪತ್ರ ಬರೆದು ಧೈರ್ಯ ತುಂಬಿದ್ದಾರೆ.
ಪತ್ರದ ಪೂರ್ಣ ಸಾರಾಂಶ
ಪ್ರೀತಿಯ ಜರೀನ್ ತಾಜ್,
ಬಹಳ ದುಃಖದಿಂದ ನಿಮಗೀ ಪತ್ರವನ್ನು ಬರೆಯುತ್ತಿದ್ದೇನೆ. ವಾಸ್ತವದಲ್ಲಿ ನಿಮಗೆ ಕೃತಜ್ಞತೆಗಳನ್ನು ಸಲ್ಲಿಸಿ, ಅಭಿನಂದಿಸುವ ಸಲುವಾಗಿ ನಾನು ನಿಮ್ಮನ್ನು ಭೇಟಿ ಮಾಡಬೇಕಿತ್ತು. ಆದರೆ ಕ್ಷಮೆ ಕೇಳಿ ಪತ್ರ ಬರೆಯುವ ಸಂದರ್ಭ ಒದಗಿ ಬಂದಿರುವುದು ನೋವುಂಟು ಮಾಡಿದೆ. ಕೊರೋನಾ ಲಾಕ್ಡೌನ್ನಿಂದ ತಮ್ಮ ಊರಿಗೂ ಸೇರಲಾಗದೇ ಇದ್ದಲ್ಲೂ ಇರಲಾಗದೇ ತುತ್ತು ಅನ್ನಕ್ಕಾಗಿ ಒದ್ದಾಡುತ್ತಿದ್ದ ವಲಸೆ ಕಾರ್ಮಿಕರಿಗೆ ಅನ್ನ ನೀಡುತ್ತಿದ್ದ ನಿಮ್ಮಗಳ ಮೇಲೆ ದಾಳಿ ನಡೆದದ್ದು ಕೇಳಿ ನಿನ್ನೆಯಿಂದ ಇದ್ದಲ್ಲಿ ಇರಲಾಗುತ್ತಿಲ್ಲ. ಮೊನ್ನೆ ಸಂಜೆ 6.30ಕ್ಕೆ ಅಮೃತಹಳ್ಳಿ ಬಳಿ ನಿಮಗೆ ಬೆದರಿಕೆ ಒಡ್ಡಿ, ನಿಮ್ಮ ಮನೆ, ಮಕ್ಕಳ ಮೇಲೆ ದಾಳಿ ನಡೆದದ್ದು ನನ್ನ ಗಮನಕ್ಕೆ ಬಂದಿತು. ನಿಜಕ್ಕೂ ಅದು ನಿದ್ದೆಗೆಡಿಸಿತು.
ಎಲ್ಲಾ ಮನುಷ್ಯರಲ್ಲೂ ಭೀತಿ ಹುಟ್ಟಿಸಿರುವ ಕೊರೋನಾ ಸೋಂಕು ಹರಡದಂತೆ ದಿಢೀರ್ ಲಾಕ್ಡೌನ್ ಘೋಷಿಸಿದಾಗ ಅಸಹಾಯಕರು ಎಲ್ಲೆಲ್ಲಿ ಹೇಗ್ಹೇಗೆ ಸಿಕ್ಕಿಕೊಂಡರೋ ಗೊತ್ತಿಲ್ಲ. ಅಂತಹವರಿಗೆ ಆತುಕೊಳ್ಳುವುದೇ ಮನುಷ್ಯತ್ವ. ಆದರೆ ಈ ಮನುಷ್ಯತ್ವದ ಮೇಲೆಯೇ ದಾಳಿ ನಡೆದಾಗ ಮಾನವೀಯತೆಯೇ ಸೋತು ಹೋಯಿತೇನೋ ಎಂದು ದಿಗಿಲಾಯಿತು. ಆದರೆ ಜರೀನ್, ಎಲ್ಲಾ ಜಾತಿ, ಧರ್ಮಗಳಲ್ಲಿ ಇಂತಹ ಅನಾಗರಿಕತೆ ಇದ್ದೇ ಇದೆ. ಅಂತಹವರು ಇಂತಹ ಅಮಾನವೀಯವಾದ ಕೃತ್ಯಗಳಿಗೆ ಇಳಿಯುತ್ತಾರೆ. ಇಂದಿನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ನೀವು ಕಹಿ ಅನುಭವಿಸಬಾರದು ಎಂದು ಪ್ರಾರ್ಥಿಸುತ್ತೇನೆ.
ಮತ್ತೊಮ್ಮೆ ಮನವಿ ಮಾಡಿಕೊಳ್ಳುತ್ತೇನೆ, ಇದರಿಂದ ನಿಮ್ಮ ಮನಸ್ಸಿನಲ್ಲಿ ಮೂಡಿರಬಹುದಾದ ಕಹಿಯನ್ನು ತೆಗೆದುಹಾಕಿ. ನಿಮ್ಮ ಮಾನವೀಯ ಸ್ಪಂದನೆಗಳಿಗೆ ಉದಾರ ಭಾರತದ ನಾಗರಿಕ ಸಮಾಜ ಕೈ ಜೋಡಿಸುತ್ತದೆಂಬ ನಂಬಿಕೆ ನನಗಿದೆ.
ಕೊರೋನಾ ಇಲ್ಲದಿದ್ದರೆ ನೇರವಾಗಿಯೇ ಬಂದು ಭೇಟಿ ಮಾಡಿ ಈ ಮಾತುಗಳನ್ನು ಹೇಳುತ್ತಿದ್ದೆ.
ಕ್ಷಮೆಯಿರಲಿ.