ಕಾರ್ಕಳ: ಚಲಿಸುತ್ತಿದ್ದ ಕಾರು ಅಚಾನಕ್ ಆಗಿ ಹೊತ್ತಿ ಉರಿದ ಘಟನೆ ನಿನ್ನೆ ಮಧ್ಯರಾತ್ರಿ ಮುಡಾರು ಗ್ರಾಮದ ಬಜಗೋಳಿ ಕಡಾರಿ ಸಮೀಪ ನಡೆದಿದೆ.
ಶೃಂಗೇರಿ ಮೂಲದ ಅಬ್ದುಲ್ ಖಾದರ್ ಮತ್ತು ಕಲಂದರ್ ಎಂಬವರು ಅದೃಷ್ಟವಶಾತ್ ಅವಘಡದಿಂದ ಪಾರಾದವರಾಗಿದ್ದಾರೆ.
ನಿನ್ನೆ ಸುರತ್ಕಲ್‌ನಿಂದ ಶೃಂಗೇರಿಗೆ ಮಾರುತಿ ಬ್ರೆಜ್ಜಾ (ಕೆಎ 51. ಎಂಕೆ 3960) ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕಡಾರಿ ತಲುಪುತ್ತಿದ್ದಂತೆ ಒಮ್ಮಿಂದೊಮ್ಮೆಗೆ ಬೆಂಕಿ ಕಾಣಿಸಿಕೊಂಡಿದೆ.
ಅಗ್ನಿಯ ಕೆನ್ನಾಲಿಗೆಗೆ ಕಾರು ಸುಟ್ಟು ಕರಕಲಾಗಿದೆ. ಕಾರು ಮಾಲಕ ಅಬ್ದುಲ್ ಖಾದರ್ ಹಾಗೂ ಕಾರಿನಲ್ಲಿದ್ದ ಕಲಂದರ್ ಅವರು ತಕ್ಷಣವೇ ಹೊರಬಂದ ಕಾರಣ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತಕ್ಷಣವೇ ಸ್ಥಳೀಯರು ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ದೌಡಾಯಿಸಿದ ಅಗ್ನಿ ಶಾಮಕ ಸಿಬ್ಬಂದಿ, ಸ್ಥಳೀಯರ ಸಹಕಾರದೊಂದಿಗೆ ಬೆಂಕಿ ನಂದಿಸಿದ್ದಾರೆ.
Follow us on Social media