ಕಾನ್ಪುರ: 8 ಮಂದಿ ಪೊಲೀಸರನ್ನು ಎನ್ ಕೌಂಟರ್ ನಲ್ಲಿ ಹತ್ಯೆಗೈಯಲು ಕಾರಣನಾದ ಕುಖ್ಯಾತ ರೌಡಿ ಶೀಟರ್ ವಿಕಾಸ್ ದುಬೆಯ ಸಹಚರ ದಯಾ ಶಂಕರ್ ಅಗ್ನಿಹೋತ್ರಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳೆದ ರಾತ್ರಿ ಎನ್ ಕೌಂಟರ್ ಮತ್ತೆ ನಡೆದು ಇಂದು ನಸುಕಿನ ಜಾವ ಅಗ್ನಿಹೋತ್ರಿಯನ್ನು ಬಂಧಿಸಲಾಯಿತು ಎಂದು ಕಾನ್ಪುರ ಪೊಲೀಸರು ತಿಳಿಸಿದ್ದಾರೆ. ಎನ್ ಕೌಂಟರ್ ನಲ್ಲಿ ಅಗ್ನಿಹೋತ್ರಿಯ ಕಾಲಿಗೆ ಪೊಲೀಸರು ಗುಂಡಿಕ್ಕಿದ್ದಾರೆ. ಆತನ ಪತ್ತೆ ಹಚ್ಚಿದವರಿಗೆ 25 ಸಾವಿರ ರೂಪಾಯಿ ನಗದು ಬಹುಮಾನ ನೀಡಲಾಗುವುದು ಎಂದು ಕಾನ್ಪುರ ವಲಯ ಪೊಲೀಸ್ ಮಹಾ ನಿರ್ದೇಶಕ ಮೊಹಿತ್ ಅಗರ್ ವಾಲ್ ತಿಳಿಸಿದ್ದಾರೆ.
ಪೊಲೀಸರು ಬಂಧಿಸಲು ಬರುತ್ತಿದ್ದ ವೇಳೆ ಆರೋಪಿ ಅಗ್ನಿಹೋತ್ರಿ ಗುಂಡಿನ ಮಳೆಗೈಯಲು ಆರಂಭಿಸಿದನು. ಅಗ್ನಿಹೋತ್ರಿ ಬಳಿಯಿಂದ ಪೊಲೀಸರು ಗನ್ ಮತ್ತು ಸಿಡಿಮದ್ದುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕೆಲ ದಿನಗಳ ಹಿಂದೆ ನಡೆದ ಕಾನ್ಪುರ ಎನ್ ಕೌಂಟರ್ ನಲ್ಲಿ ವಿಕಾಸ್ ದುಬೆ ಮುಖ್ಯ ಆರೋಪಿಯಾಗಿದ್ದು ಆತನ ಬಂಧನಕ್ಕೆ ಪೊಲೀಸರು ಬಲೆಬೀಸಿದ್ದಾರೆ. ಪತ್ತೆಹಚ್ಚಿದವರಿಗೆ 1 ಲಕ್ಷ ರೂಪಾಯಿ ನಗದು ಬಹುಮಾನವನ್ನು ಉತ್ತರ ಪ್ರದೇಶ ಪೊಲೀಸರು ಘೋಷಿಸಿದ್ದಾರೆ.
ಈ ಮಧ್ಯೆ ವಿಕಾಸ್ ದುಬೆಗೆ ಸೇರಿದ ಮನೆಯನ್ನು ಪೊಲೀಸರು ಕೆಡವಿದ್ದು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
Follow us on Social media