Breaking News

ಕಾಂಗ್ರೆಸ್ ನಲ್ಲಿ ಆಂತರಿಕ ಭಿನ್ನಮತ ಸ್ಫೋಟ: ಡಾ ಮನಮೋಹನ್ ಸಿಂಗ್ ಬೆಂಬಲಕ್ಕೆ ನಿಂತ ಹಿರಿಯ ನಾಯಕರು

ನವದೆಹಲಿ:ಕಾಂಗ್ರೆಸ್ ನಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಒಂದು ವಿಷಯ ಬಹುಮುಖ್ಯವಾಗಿ ಚರ್ಚೆಗೆ ಬರುತ್ತಿದೆ. ಪಕ್ಷ ಹೀನಾಯವಾಗಿ ಸೋಲಲು ಕಳೆದ ಯುಪಿಎ ಸರ್ಕಾರದ ನಾಯಕತ್ವ, ಪ್ರಧಾನಿಯಾಗಿದ್ದ ಡಾ ಮನಮೋಹನ್ ಸಿಂಗ್ ಅವರ ಕಳಪೆ ನಿರ್ಧಾರಗಳು, ಕೆಲಸಗಳು ಕಾರಣ ಎಂದು ಯುವ ನಾಯಕರು ಆರೋಪಿಸಿದ್ದಾರೆ.

ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಪಕ್ಷದ ಹಿರಿಯ ನಾಯಕರು ತಮ್ಮದೇ ವ್ಯಾಖ್ಯಾನ ನೀಡುತ್ತಾ ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ ಅವರ ಬೆಂಬಲಕ್ಕೆ ನಿಂತಿದ್ದಾರೆ.

ಡಾ ಮನಮೋಹನ್ ಸಿಂಗ್ ಸರ್ಕಾರದಲ್ಲಿ ಅವರ ಸಂಪುಟದಲ್ಲಿ ಸಚಿವರಾಗಿದ್ದ ಆನಂದ್ ಶರ್ಮ, ಶಶಿ ತರೂರ್, ಮನೀಶ್ ತಿವಾರಿ, ಮುಂಬೈಯ ಮಾಜಿ ಕಾಂಗ್ರೆಸ್ ಮುಖ್ಯಸ್ಥ ಮಿಲಿಂಡ್ ದಿಯೊರಾ ಮನಮೋಹನ್ ಸಿಂಗ್ ಅವರ ಪರವಾಗಿ ಮಾತನಾಡಿದ್ದಾರೆ.
ಮನಮೋಹನ್‌ ಸಿಂಗ್‌ ಅವರು ಅತ್ಯುತ್ತಮ ಆಡಳಿತ ನೀಡಿದ್ದರು. ಆದರೆ ಬಿಜೆಪಿಯ ಅಪಪ್ರಚಾರ ಮತ್ತು ನಮ್ಮ ಪಕ್ಷದೊಳಗಿನ ಅಸಹಕಾರದಿಂದ 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಸೋಲಬೇಕಾಯಿತು ಎಂದು ನಾಯಕರು ಪ್ರತಿಪಾದಿಸಿದ್ದಾರೆ.

ಮಾಜಿ ಸಚಿವ ಆನಂದ್ ಶರ್ಮ ಯುಪಿಎ ಸರ್ಕಾರವಿರುವಾಗ ಮಾಡಿದ್ದ ಸಾಧನೆಗಳ ಪಟ್ಟಿ ಮಾಡಿ ರಾಜಕೀಯ ಪಿತೂರಿ, ಬಿಜೆಪಿಯ ಅಪಪ್ರಚಾರ, ಸುಳ್ಳು ಆಪಾದನೆಗಳಿಂದ, ರಾಜಕೀಯ ವೈರಿಗಳಿಂದ ಮತ್ತು ಪಟ್ಟಭದ್ರ ಹಿತಾಸಕ್ತಿಗಳಿಂದಾಗಿ ಕಾಂಗ್ರೆಸ್ ಸೋತಿತು ಎಂದು 11 ಟ್ವೀಟ್ ಗಳ ಮೂಲಕ ಬರೆದಿದ್ದಾರೆ.

ಬಿಜೆಪಿ 2004ರಿಂದ 2014ರವರೆಗೆ 10 ವರ್ಷಗಳ ಕಾಲ ಅಧಿಕಾರದಲ್ಲಿರಲಿಲ್ಲ. ಆಗ ಬಿಜೆಪಿಯಲ್ಲಿ ನಾಯಕರು ಯಾರಾದರೂ ವಾಜಪೇಯಿಯವರನ್ನಾಗಲಿ, ನಾಯಕತ್ವವನ್ನಾಗಲಿ ದೂರಿದ್ದರೇ, ಕಾಂಗ್ರೆಸ್ ನಲ್ಲಿ ಕೆಲವು ಅಜ್ಞಾನಿಗಳು ಎನ್ ಡಿಎ ಮತ್ತು ಬಿಜೆಪಿ ಪರ ಹೋರಾಡುವ ಬದಲು ಮನಮೋಹನ್ ಸಿಂಗ್ ವಿರುದ್ಧ ಮತ್ತು ಆಂತರಿಕವಾಗಿ ಕಚ್ಚಾಡುತ್ತಿರುವುದು ಕಳವಳಕಾರಿ ಎಂದು ಮನೀಶ್ ತಿವಾರಿ ಹೇಳಿದ್ದಾರೆ.

2014ರಲ್ಲಿ ಕಚೇರಿ ತೊರೆಯುವಾಗ ಇತಿಹಾಸ ತಮ್ಮ ಮೇಲೆ ಕರುಣೆ ತೋರಿಸುತ್ತದೆ ಎಂದು ಮನಮೋಹನ್ ಸಿಂಗ್ ಹೇಳಿದ್ದರು. ಆದರೆ ಅವರ ಪಕ್ಷದೊಳಗೆ ಅವರು ದೇಶಕ್ಕೆ ಮಾಡಿದ ಸೇವೆಯನ್ನು ಅವರ ಪರಂಪರೆಯನ್ನು ಅವರ ಎದುರೇ ನಾಶಮಾಡಲು ನೋಡುತ್ತಿದ್ದಾರೆ ಎಂದು ಅವರು ಯೋಚನೆ ಮಾಡಿರಬಹುದೇ ಎಂದು ಮಿಲಿಂದ್ ದಿಯೊರಾ ಕೇಳಿದ್ದಾರೆ.

ಕಳೆದ ಗುರುವಾರ ದೆಹಲಿಯಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಕಾಂಗ್ರೆಸ್ ಸಭೆ ನಡೆದಿತ್ತು. ಅದರಲ್ಲಿ ಕಾಂಗ್ರೆಸ್ ನ ದಿಢೀರ್ ಕುಸಿತಕ್ಕೆ ಕಳೆದ ಯುಪಿಎ ಸರ್ಕಾರದ ಕಳಪೆ ಕಾರ್ಯವೈಖರಿ ಕಾರಣ, ಸರಿಯಾದ ನಾಯಕತ್ವ ಇಲ್ಲದಿದ್ದುದೇ ಕಾರಣ ಎಂದು ಯುವ ನಾಯಕರು ನೇರವಾಗಿ ಆರೋಪಿಸಿ ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಿ ವಾಪಸ್ಸಾಗಬೇಕೆಂದು ಒತ್ತಾಯಿಸಿದರು.

ಮೌನಿ ಪ್ರಧಾನಿ ಎಂದೇ ಹೆಸರಾಗಿದ್ದ ಮನಮೋಹನ್ ಸಿಂಗ್ ವಿಡಿಯೊ ಕಾನ್ಫರೆನ್ಸ್ ವೇಳೆ ಇಷ್ಟೆಲ್ಲಾ ಆರೋಪ, ಆಪಾದನೆ ಬಂದರೂ ನಾಲ್ಕು ಗಂಟೆಗಳ ವಿಡಿಯೊ ಕಾನ್ಫರೆನ್ಸ್ ಸಭೆಯಲ್ಲಿ ಒಂದು ಮಾತನ್ನೂ ಹೇಳಲಿಲ್ಲ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×