ನವದೆಹಲಿ: ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೊದಲ ಬಾರಿಗೆ ಮೌನ ಮುರಿದಿದ್ದು, ಪಕ್ಷ ತೊರೆಯಬೇಕೆಂದು ಬಯಸಿದವರು ತೊರೆಯಲಿ, ಅದರಿಂದ ಯುವಕರಿಗೆ ಅವಕಾಶದ ಬಾಗಿಲು ತೆರೆಯುತ್ತದೆ ಎಂದು ಹೇಳಿದ್ದಾರೆ.
ಈ ಕುರಿತಂತೆ ಸುದ್ದಿಸಂಸ್ಥೆಯೊಂದು ವರದಿ ಮಾಡಿದ್ದು, ಕಾಂಗ್ರೆಸ್‌ನ ಯುವ ಘಟಕ ಎನ್‌ಎಸ್‌ಯುಐನ ಸಭೆಯಲ್ಲಿ ಮಾತನಾಡಿರುವ ರಾಹುಲ್ ಗಾಂಧಿ ಅವರು, ‘ಸಚಿನ್ ಪೈಲಟ್ ಹೆಸರನ್ನು ಪ್ರಸ್ತಾಪಿಸದೇ ಪಕ್ಷ ತೊರೆಯ ಬಯಸಿದವರು ತೊರೆಯಬಹುದು, ಅದರಿಂದ ಯುವ ನಾಯಕರಿಗೆ ಪಕ್ಷದ ಬಾಗಿಲು ತೆರೆಯುತ್ತದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಕಳೆದ ನಾಲ್ಕು ದಿನಗಳಿಂದ ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿದ್ದು, ಅಶೋಕ್ ಗೆಹ್ಲೋಟ್ ಹಾಗೂ ಸಚಿನ್ ಪೈಲಟ್ ನಡುವೆ ಭಿನ್ನಮತ ಸೃಷ್ಟಿಯಾಗಿ ಪೈಲಟ್ ಬಂಡಾಯದ ಬಾವುಟ ಹಾರಿಸಿದ್ದಾರೆ. ಇದರಿಂದ ಸಚಿನ್ ಪೈಲಟ್ ಅವರನ್ನು ಡಿಸಿಎಂ ಹಾಗೂ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿತ್ತು. ಮೂರು ತಿಂಗಳ ಹಿಂದೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಜ್ಯೋತಿರಾಧಿತ್ಯ ಸಿಂಧಿಯಾ ರೀತಿಯಲ್ಲಿಯೇ ಸಚಿನ್ ಪೈಲಟ್ ಕೂಡ ಭಾರತೀಯ ಜನತಾ ಪಕ್ಷ ಸೇರುತ್ತಾರೆಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಬುಧವಾರ ಬೆಳಗ್ಗೆ ನಾನು ಬಿಜೆಪಿ ಸೇರುವುದಿಲ್ಲ, ನಾನಿನ್ನು ಕಾಂಗ್ರೆಸ್‌ನಲ್ಲಿದ್ದೇನೆ ಎಂದು ಹೇಳಿದ್ದ ಸಚಿನ್ ಪೈಲಟ್ ಕುತೂಹಲ ಸೃಷ್ಟಿಸಿದ್ದಾರೆ.
Follow us on Social media