ಬೆಂಗಳೂರು: ಕರ್ನಾಟಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಕೊರೋನಾ ವೈರಸ್ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಕಳೆದ 2-3 ದಿನಗಳಿಂದ ಅವರನ್ನು ಭೇಟಿ ಮಾಡಿದ ಎಲ್ಲರನ್ನೂ ಕೋವಿಡ್-19 ಪರೀಕ್ಷೆಗೊಳಪಡಿಸಲಾಗುತ್ತದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.
ಈ ಬಗ್ಗೆ ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದ್ದು, ಕಳೆದ 2-3 ದಿನಗಳಿಂದ ಅವರನ್ನು ಭೇಟಿ ಮಾಡಿದ ಎಲ್ಲರನ್ನೂ ಕೋವಿಡ್-19 ಪರೀಕ್ಷೆಗೊಳಪಡಿಸ ಆರೋಗ್ಯ ಸಚಿವಾಲಯ ನಿರ್ಧರಿಸಿದೆ. ಹೀಗಾಗಿ ಸಿಎಂ ಬಿಎಸ್ ವೈ ಅವರ ಟ್ರಾವೆಲ್ ಹಿಸ್ಟರಿ ಪತ್ತೆ ಮಾಡಲಾಗುತ್ತಿದ್ದು, ಸಿಎಂ ಬಿಎಸ್ ವೈ ಅವರ ಕಳೆದ 2-3 ದಿನಗಳ ಎಲ್ಲ ಕಾರ್ಯಕ್ರಮಗಳು ಮತ್ತು ಅದರಲ್ಲಿ ಪಾಲ್ಗೊಂಡವರ ಕುರಿತು ಮಾಹಿತಿ ಕಲೆಹಾಕಲಾಗುತ್ತಿದೆ. ಅಂತೆಯೇ ಅವರ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್ ಮಾಡಿ ಅವರನ್ನು ಕೊರೋನಾ ಪರೀಕ್ಷೆಗೊಳಪಡಿಸಲಾಗುತ್ತದೆ ಎಂದು ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ ಎನ್ನಲಾಗಿದೆ.
ನಿನ್ನೆ ಕೋವಿಡ್-19 ಪರೀಕ್ಷೆಗೊಳಪಟ್ಟಿದ್ದ ಸಿಎಂ ಬಿಎಸ್ ಯಡಿಯೂರಪ್ಪ ಅವರ ಪರೀಕ್ಷಾ ವರದಿ ಇಂದು ಪಾಸಿಟಿವ್ ಬಂದಿತ್ತು, ಬಿಎಸ್ ವೈ ಮಾತ್ರವಲ್ಲದೇ ಅವರ ಪುತ್ರಿ ಪದ್ಮಾವತಿ ಅವರಿಗೂ ಪಾಸಿಟಿವ್ ಬಂದಿದ್ದು, ಇಬ್ಬರನ್ನೂ ಪ್ರತಿಷ್ಠಿತ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪ್ರಸ್ತುತ ಇಬ್ಬರ ಆರೋಗ್ಯ ಸ್ಥಿರವಾಗಿದ್ದು, ಸಿಎಂ ಯಡಿಯೂರಪ್ಪನವರಿಗೆ ಯಾವುದೇ ಗುಣಲಕ್ಷಣ ಕಂಡು ಬಂದಿರಲಿಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಇನ್ನು ಬಿಎಸ್ ವೈ ಪುತ್ರ ವಿಜಯೇಂದ್ರ ಅವರ ವರದಿ ನೆಗೆಟಿವ್ ಬಂದಿದೆ ಎನ್ನಲಾಗಿದೆ.
ಕಾವೇರಿ ನಿವಾಸದಿಂದ ಮಣಿಪಾಲ್ ಆಸ್ಪತ್ರೆಗೆ ಆಹಾರ
ಮಣಿಪಾಲ್ ಆಸ್ಪತ್ರೆಯಲ್ಲಿರುವ ಸಿಎಂ ಅವರ ಬೆಳಗ್ಗಿನ ಉಪಹಾರಕ್ಕೆ ಅವರ ಮನೆಯಿಂದಲೇ ತಿಂಡಿ ತರಿಸಲಾಗಿದೆ. ಕಾವೇರಿ ನಿವಾಸದಿಂದಲೇ ಸಿಎಂ ಬಿಎಸ್ವೈ ಗೆ ಉಪಹಾರ ವ್ಯವಸ್ಥೆ ಮಾಡಲಾಗಿದೆ. ಸಿಎಂ ಕಚೇರಿ ಸಿಬ್ಬಂದಿ ಕಾವೇರಿ ನಿವಾಸದಿಂದ ಬಿಸಿ ಬಿಸಿ ತಿಂಡಿ ತಂದುಕೊಟ್ಟಿದ್ದಾರೆ. ವೈದ್ಯರ ಸೂಚನೆ ಮೇರೆಗೆ ಯಡಿಯೂರಪ್ಪನವರು ಆಹಾರದ ಮೇಲೆ ವಿಶೇಷ ನಿಗಾ ಇಡಲಾಗಿದೆ. ಸಿಎಂ ಅವರಿಗೆ ಬೆಳಗಿನ ಉಪಹಾರಕ್ಕೆ ಉಪ್ಪಿಟ್ಟು, ದೋಸೆ, ಕಷಾಯ, ಬಿಸಿ ನೀರು ತಂದುಕೊಟ್ಟಿದ್ದಾರೆ.