ಕಲಬುರಗಿ : ಆನ್‌ಲೈನ್ ಲೂಡೋ ಗೇಮ್ ಆಟಕ್ಕೆ ಸಂಬಂಧಿಸಿದಂತೆ ಸ್ನೇಹಿತರ ನಡುವೆ ಆರಂಭವಾದ ಗಲಾಟೆ ವಿದ್ಯಾರ್ಥಿಯೋರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ಅಫಜಲಪುರ ತಾಲೂಕಿನ ಮಾಶಾಳ ಗ್ರಾಮದಲ್ಲಿ ನಡೆದಿದೆ.
ಶಾಮರಾಯ ಪರೀಟ್ (16) ಕೊಲೆಯಾದ ವಿದ್ಯಾರ್ಥಿ. ಈತನ ಎದೆಗೆ ಚಾಕು ಇರಿದು ಬರ್ಬರವಾಗಿ ಕೊಲೆ ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಈತನ ಮೂವರು ಸ್ನೇಹಿತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಎಸೆಸ್ಸೆಲ್ಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದ ಶಾಮರಾಯ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ. ಕಳೆದೊಂದು ತಿಂಗಳ ಹಿಂದೆ ಲೂಡೋ ಗೇಮ್ ವಿಚಾರವಾಗಿ ಮತ್ತು ಇತರ ಕಾರಣಗಳಿಗಾಗಿ ಸ್ನೇಹಿತ ಸಚಿನ್ ಕಿರಸಾವಳಗಿ (22) ಮತ್ತು ಶಾಮರಾಯನ ನಡುವೆ ಗಲಾಟೆ ನಡೆದಿತ್ತು. ಬುಧವಾರ ರಾತ್ರಿ ಮತ್ತೆ ಇವರಿಬ್ಬರ ನಡುವೆ ಗಲಾಟೆ ನಡೆದು ಪರಸ್ಪರ ಬೈದಾಡಿಕೊಂಡಿದ್ದಾರೆ. ಬಳಿಕ ಶಾಮರಾಯನ ಸಹೋದರ ಧರ್ಮರಾಜ್ ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನ ಪಡಿಸಿ ಸಚಿನ್‌ನನ್ನು ಆತನ ಮನೆಗೆ ಕಳುಹಿಸಿದ್ದಾರೆ. ಆದರೆ ಸ್ವಲ್ಪ ಸಮಯದ ಬಳಿಕ ಶಾಮರಾಯನ ಮನೆಗೆ ಚಾಕುವಿನೊಂದಿಗೆ ಆಗಮಿಸಿದ ಸಚಿನ್ ಶಾಮರಾಯನ ಎದೆಗೆ ಚುಚ್ಚಿದ್ದಾನೆ. ತೀವ್ರ ರಕ್ತಸ್ರಾವದಿಂದಾಗಿ ಶಾಮರಾಯ ಸಾವನ್ನಪ್ಪಿದ್ದಾನೆ. ಮಾಹಿತಿ ತಿಳಿದ ತತ್‌ಕ್ಷಣ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಶಾಮರಾಯನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅಫಜಲಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. ತನಿಖೆ ಬಳಿಕವಷ್ಟೇ ಕೊಲೆಗೆ ನಿಖರ ಕಾರಣ ಪತ್ತೆಯಾಗಬೇಕಿದೆ.
Follow us on Social media