ಬೆಂಗಳೂರು: 15 ವರ್ಷಗಳ ಬಳಿಕ ಕರ್ನಾಟಕದಲ್ಲಿ ಲಾಟರಿ (Karnataka Lottery) ಮಾರಾಟವನ್ನು ಸರ್ಕಾರ ಅಧಿಕೃತಗೊಳಿಸುತ್ತಾ? ಈ ಬಗ್ಗೆ ಮಹತ್ವದ ಬೆಳವಣಿಗೆ ನಡೆಯುತ್ತಿದ್ದು, ಖುದ್ದು ರಾಜ್ಯಪಾಲರ ಕಛೇರಿಯಿಂದ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ.
ಲಾಟರಿ ಮಾರಾಟ ಬ್ಯುಸಿನೆಸ್, ನೆರೆಯ ಕೇರಳ (Kerala) ರಾಜ್ಯದಲ್ಲಿ ಎಷ್ಟು ಫೇಮಸ್ ಆಗಿದ್ದು, ನಮ್ಮ ರಾಜ್ಯದಲ್ಲಿಯೂ ಇದು ಚಾಲ್ತಿಯಲ್ಲಿತ್ತು. ಲಾಟರಿ ಮಾರಾಟದಿಂದ ಸಾವಿರಾರು ಕುಟುಂಬಗಳು ಬೀದಿಗೆ ಬಿದ್ವು ಅಂತ 2007ರಲ್ಲಿ ರಾಜ್ಯ ಸರ್ಕಾರ ಲಾಟರಿ ಮಾರಾಟವನ್ನು ನಿಷೇಧಿಸಿತು. ಆದ್ರೆ ಇದೀಗಾ ಮತ್ತೆ ಲಾಟರಿ ಮಾರಾಟವನ್ನು ಶುರು ಮಾಡಬೇಕು ಎಂದು ಕರ್ನಾಟಕ ರಾಜ್ಯ ಲಾಟರಿ ಚಿಲ್ಲರೆ ಮಾರಾಟಗಾರರ ಸಂಘ ಸರ್ಕಾರಕ್ಕೆ ಒತ್ತಾಯಿಸಿದೆ.
ಈ ಬಗ್ಗೆ ಸಿಎಂ ಹಾಗೂ ರಾಜ್ಯಪಾಲರಿಗೂ ಪತ್ರ ಬರೆದಿದ್ದು, ಪುನರಾರಂಭ ಮಾಡುವಂತೆ ಪತ್ರದಲ್ಲಿ ಮನವಿ ಮಾಡಲಾಗಿದೆ. ಈ ಬಗ್ಗೆ ರಾಜ್ಯಪಾಲರ ಕಛೇರಿಯಿಂದ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೂ ಪತ್ರ ಬರೆಯಲಾಗಿದ್ದು, ಮತ್ತೆ ಲಾಟರಿ ಶುರುವಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ರಾಜ್ಯದಲ್ಲಿ 2007ಕ್ಕಿಂತ ಮುಂಚೆ, ಸರ್ಕಾರವೇ 7 ಲಾಟರಿಗಳನ್ನು ನಡೆಸ್ತಿತ್ತು. ವಾರ್ಷಿಕ ನೂರು ಕೋಟಿ ಆದಾಯ ಸರ್ಕಾರಕ್ಕೆ ಬರ್ತಿತ್ತು. ಈ ಮೂಲಕ ಲಾಟರಿ ಮಾರಾಟ ಮಾಡುವ ಏಜೆಂಟ್‍ಗಳು ಕೂಡ ಬದುಕು ಸಾಗಿಸ್ತಿದ್ರು.
ಆದ್ರೆ ರಾಜ್ಯ ಸರ್ಕಾರ ನಿಷೇಧ ಮಾಡಿದ ಬಳಿಕ, ಕೆಲವರು 2014ರಲ್ಲಿ ಸುಪ್ರೀಂಕೋರ್ಟ್‍ನಲ್ಲಿ ಮೊಕದ್ದಮೆ ಹೂಡ್ತಾರೆ. ಸುಪ್ರೀಂಕೋರ್ಟ್ ಕೂಡ ಇದು ರಾಜ್ಯ ಸರ್ಕಾರಕ್ಕೆ ಬಿಟ್ಟ ವಿವೇಚನೆ ಅಂತ ಅಭಿಪ್ರಾಯ ವ್ಯಕ್ತಪಡಿಸಿತ್ತು. ಹೀಗಾಗಿ ರಾಜ್ಯ ಸರ್ಕಾರ ಕೂಡಲೇ ಮತ್ತೆ ಲಾಟರಿ ಮಾರಾಟವನ್ನು ಪುನರಾರಂಭಿಸಬೇಕೆಂದು ಕರ್ನಾಟಕ ರಾಜ್ಯ ಲಾಟರಿ ಚಿಲ್ಲರೆ ಮಾರಾಟಗಾರರ ಸಂಘ ಒತ್ತಾಯಿಸಿದೆ.
ಲಾಟರಿ ಮಾರಾಟ ಮರು ಅನುಷ್ಠಾನ ಹಾಗೂ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ಹಾಗೂ ಪಿಂಚಣಿ, ಸಣ್ಣ ಉಳಿತಾಯ ಮತ್ತು ಆಸ್ತಿ ಋಣ ನಿರ್ವಹಣೆ ನಿರ್ದೇಶನಾಲಯಕ್ಕೂ ರಾಜ್ಯಪಾಲರ ಕಛೇರಿಯಿಂದ ಪತ್ರ ಬರೆಯಲಾಗಿದ್ದು, ಸರ್ಕಾರದ ಅಂಗ ಸಂಸ್ಥೆ MSIL ಮೂಲಕ ಲಾಟರಿಯನ್ನು ಸರ್ಕಾರ ನಡೆಸುತಿತ್ತು. ರಾಜ್ಯದಲ್ಲಿ ಸಾಂಪ್ರದಾಯಿಕ ಲಾಟರಿ ವ್ಯವಸ್ಥೆ ಪುನರಾರಂಭಕ್ಕೆ ಸರ್ಕಾರ ಮುಂದಾಗಬೇಕು, ಲಾಟರಿ ಮಂತ್ರಿಯನ್ನು ನೇಮಕ ಮಾಡಬೇಕು.
ರಾಜ್ಯದ ಸಂಪನ್ಮೂಲ ಹೆಚ್ಚಳದ ಜೊತೆಗೆ, ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಲಾಟರಿ ಮಾರಾಟ ವ್ಯವಸ್ಥೆಯನ್ನು ಶುರುಮಾಡಬೇಕೆಂದು ಸಂಘಟನೆಯಿಂದ ತೀವ್ರ ಒತ್ತಡವಿದೆ. ಆದ್ರೆ ಇದು ರಾಜ್ಯ ಸರ್ಕಾರದ ವಿವೇಚನೆಗೆ ಬಿಟ್ಟ ವಿಚಾರ ಆಗಿರೋದ್ರಿಂದ ಸರ್ಕಾರ ಏನು ನಿಲುವು ತೆಗೆದುಕೊಳ್ಳುತ್ತೆ ಎಂಬುದನ್ನು ಕಾದು ನೋಡಬೇಕಿದೆ.
Follow us on Social media