Breaking News

ಕರಾವಳಿ ಜಿಲ್ಲೆಯ ಅಡಿಕೆ ಬೆಳೆಗಾರರಿಗೆ ಸುಗ್ಗಿ: ಬಿಳಿ ಅಡಿಕೆ ಧಾರಣೆ ಕಿಲೋಗೆ 500 ರೂಪಾಯಿ!

ಮಂಗಳೂರು: ಕರಾವಳಿ ಮತ್ತು ಕೇರಳದ ಕಾಸರಗೋಡು ಸೇರಿದಂತೆ ಕೆಲ ಭಾಗಗಳ ಅಡಿಕೆ ಬೆಳೆಗಾರರಿಗೆ ಈಗ ಸಂಭ್ರಮದ ಸಮಯ. ಕಳೆದ ಒಂದು ವರ್ಷದಲ್ಲಿ ಬಿಳಿ ಅಡಿಕೆ ಧಾರಣೆ ದುಪ್ಪಟ್ಟು ಏರಿಕೆಯಾಗಿದೆ.

ದೇಶಿ ಮಾರುಕಟ್ಟೆಯಲ್ಲಿ ನಿನ್ನೆ ಬಿಳಿ ಅಡಿಕೆ ಬೆಲೆ ಪ್ರತಿ ಕಿಲೋಗೆ 505ರಿಂದ 520ಕ್ಕೆ ಏರಿಕೆಯಾಗಿದೆ. ಹೊಸ ಅಡಿಕೆಗೆ ಕೆಜಿಗೆ 425ರಿಂದ 440 ರೂಪಾಯಿಗೆ ಹೆಚ್ಚಳವಾಗಿದೆ.

ವರ್ಷದ ಹಿಂದೆ ಬಿಳಿ ಹಳೆ ಅಡಿಕೆಗೆ ಕಿಲೋಗೆ 260 ಇದ್ದರೆ ಹೊಸ ಅಡಿಕೆಗೆ 220ರಷ್ಟು ಕೆಜಿಗೆ ಬೆಲೆಯಿತ್ತು. ಇದೇ ಮೊದಲ ಸಲ ಒಂದೇ ವರ್ಷದಲ್ಲಿ ಅಡಿಕೆ ಬೆಲೆ ಇಷ್ಟೊಂದು ಹೆಚ್ಚಳವಾಗಿದೆ. ಆದರೆ ಈ ಬಾರಿ ಬೆಳೆ ಕಡಿಮೆಯಿರುವುದರಿಂದ ದೇಶದ ಗಡಿಭಾಗದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಇಂಡೋನೇಷಿಯಾ, ಮಯನ್ಮಾರ್ ಗಳಿಂದ ನೇಪಾಳ ಮೂಲಕ ಅಕ್ರಮವಾಗಿ ಅಡಿಕೆ ಬರಲು ಸಾಧ್ಯವಾಗದಿರುವುದೇ ಮಂಗಳೂರು ಭಾಗದಲ್ಲಿ ಅಡಿಕೆಗೆ ಬೆಲೆ ಹೆಚ್ಚಾಗಲು ಕಾರಣ ಎಂದು ಹೇಳಲಾಗುತ್ತಿದೆ.

ಅಡಿಕೆ ಮತ್ತು ಕೊಕ್ಕೊ ಮಾರುಕಟ್ಟೆ ಮತ್ತು ನಿಯಂತ್ರಣ ಸಹಕಾರ ಸಮಿತಿ ಕೇಂದ್ರದ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ಈ ಬಾರಿ ಅಡಿಕೆ ಬೆಳೆ ಶೇಕಡಾ 40ರಷ್ಟು ಕಡಿಮೆಯಾಗಿದೆ. ಮಳೆ ಸರಿಯಾಗಿ ಬಾರದಿರುವುದು ಮತ್ತು ಕೊಳೆರೋಗದಿಂದಲೂ ಬೆಳೆ ಸಾಕಷ್ಟು ಹಾನಿಗೀಡಾಗಿರುವುದರಿಂದ ಸುಪಾರಿ ಮತ್ತು ಇತರ ಬಳಕೆಗೆ ಅಡಿಕೆ ಬೇಡಿಕೆ ಉತ್ತರ ಭಾರತದಲ್ಲಿ ನಿಧಾನವಾಗಿ ಹೆಚ್ಚಾಗುತ್ತಿದೆ. ಬೆಲೆ ಮತ್ತಷ್ಟು ಏರಿಕೆಯಾಗಬಹುದೆಂದು ದೊಡ್ಡ ದೊಡ್ಡ ಅಡಿಕೆ ಬೆಲೆಗಾರರು ಸಂಗ್ರಹಿಸಿಟ್ಟುಕೊಳ್ಳುತ್ತಿದ್ದಾರೆ. ಇವೆಲ್ಲವೂ ಧಾರಣೆ ಇಷ್ಟೊಂದು ಹೆಚ್ಚಾಗಲು ಕಾರಣವಾಗಿದೆ ಎನ್ನುತ್ತಾರೆ.

ಈಗಿನ ಪರಿಸ್ಥಿತಿ ನೋಡಿದಾಗ ಬೆಳೆ ಕಡಿಮೆಯಾಗಿರುವುದರಿಂದ ಮುಂದಿನ ದಿನಗಳಲ್ಲಿ ಅಡಿಕೆ ಬೆಲೆ ಮತ್ತಷ್ಟು ಹೆಚ್ಚಳವಾಗಬಹುದೆಂದು ಕೊಡ್ಗಿ ಹೇಳುತ್ತಾರೆ.

ಈ ಮಧ್ಯೆ, ಹಳೆ ಅಡಿಕೆಗೆ ಕ್ಯಾಂಪ್ಕೊ 505 ರೂಪಾಯಿ ಘೋಷಿಸಿದ್ದರೂ ಕೂಡ ಕೇರಳ ಮತ್ತು ಕರ್ನಾಟಕದ ಹಲವು ಸಂಗ್ರಹ ಕೇಂದ್ರಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅಡಿಕೆ ಬಂದಿಲ್ಲ. ಹೀಗಾಗಿ ಮತ್ತಷ್ಟು ಬೆಲೆ ಏರಿಕೆಯಾಗಬಹುದೆಂದು ಬೆಳೆಗಾರರು ನಿರೀಕ್ಷೆಯಲ್ಲಿದ್ದಾರೆ.

ಅಡಿಕೆ ಬೆಳೆ ಹೆಚ್ಚಾಗಿರುವುದು ಕಂಡು ಹಲವರು ಖುಷಿಯಾಗಿದ್ದರೆ ಇನ್ನು ಕೆಲವರು ಇದು ಒಳ್ಳೆ ಬೆಳವಣಿಗೆಯಲ್ಲ ಎನ್ನುತ್ತಾರೆ. ಬಂಟ್ವಾಳ ತಾಲ್ಲೂಕಿನ ಪೆರುವಾಯಿಯ ಗೋವಿಂದ ಭಟ್, ಮುಂದಿನ ದಿನಗಳಲ್ಲಿ ಬೆಲೆ ಸ್ಥಿರವಾಗಿರದಿದ್ದರೆ ಸಣ್ಣ ರೈತರಿಗೆ ಕಷ್ಟವಾಗಲಿದೆ. ದೊಡ್ಡ ಕೃಷಿಕರನ್ನು ಜೀವನ ವಿಧಾನದಲ್ಲಿ ಸಣ್ಣ ರೈತರು ಅನುಸರಿಸುವುದರಿಂದ ಮುಂದಿನ ವರ್ಷಗಳಲ್ಲಿ ಕಷ್ಟವಾಗಬಹುದು ಎನ್ನುತ್ತಾರೆ ಅವರು.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×