ದುಬೈ: ಐಪಿಎಲ್ 2020 ಟೂರ್ನಿಯ ಇಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಕಿಂಗ್ಸ್ ಎಲೆವನ್ ಪಂಜಾಬ್ ತಂಡ 8 ವಿಕೆಟ್ ಗಳ ಅಂತರದಲ್ಲಿ ಮಣಿಸಿತು.
ಆರ್ ಸಿಬಿ ನೀಡಿದ 172 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಪಂಜಾಬ್ ತಂಡ ನಿಗದಿತ 20 ಓವರ್ ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 177ರನ್ ಗಳಿಸುವ ಮೂಲಕ 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು. ಸವಾಲಿನ ಗುರಿಯನ್ನು ಬೆನ್ನು ಹತ್ತಿದ ಪಂಜಾಬ್ ತಂಡ ಆರಂಭದಿಂದಲೂ ಉತ್ತಮ ಬ್ಯಾಟಿಂಗ್ ಮಾಡಿತು. ಆರಂಭಿಕರಾಗಿ ಕಣಕ್ಕಿಳಿದ ಮಯಾಂಕ್ ಅಗರ್ವಾಲ್ ಕೇವಲ 25 ಎಸೆತಗಳಲ್ಲಿ 4 ಬೌಂಡರಿ ಹಾಗೂ 63 ಸಿಕ್ಸರ್ ಗಳ ನೆರವಿನಿಂದ 45 ರನ್ ಗಳಿಸಿ ತಂಡಕ್ಕೆ ಉತ್ತಮ ಆರಂಭ ನೀಡಿದರು. ಆದರೆ ಅರ್ಧ ಶತಕದ ಹೊಸ್ತಿಲಲ್ಲಿರುವಾಗಲೇ ಚಹಲ್ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿದರು.
ಬಳಿಕ ಕೆಎಲ್ ರಾಹುಲ್ ಜೊತೆಗೂಡಿದ ದೈತ್ಯ ಕ್ರಿಸ್ ಗೇಯ್ಲ್ ಬೆಂಗಳೂರು ತಂಡದ ಬೌಲರ್ ಗಳ ಬೆವರಿಳಿಸಿದರು. ಅಮೋಘ 93 ರನ್ ಗಳ ಜೊತೆಯಾಟವಾಡಿದ ಈಜೋಡಿ ತಂಡವನ್ನು ಗೆಲುವಿನ ಹೊಸ್ತಿಲಲ್ಲಿ ನಿಲ್ಲಿಸಿತು. ಕೆಎಲ್ ರಾಹುಲ್ 49 ಎಸೆತಗಳಲ್ಲಿ ಅಜೇಯ 61 ಗಳಿಸಿ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದರು. ಅವರಿಗೆ ಉತ್ತಮ ಸಾಥ್ ನೀಡಿದ ಕ್ರಿಸ್ ಗೇಯ್ಲ್ 45 ಎಸೆತಗಳಲ್ಲಿ 53 ರನ್ ಗಳಿಸಿದರು. ಅಂತಿಮ ಓವರ್ ನಲ್ಲಿ ಗೆಲುವಿನ ಹೊಸ್ತಿಲಲ್ಲಿದ್ದಾಗ ಗೇಯ್ಲ್ ರನೌಟ್ ಆದರು. ಅಂತಿಮ ಎಸೆತಕ್ಕೆ ಕ್ರೀಸ್ ಗೆ ಬಂದ ನಿಕೋಲಸ್ ಪೂರನ್ ತಾವೆದುರಿಸಿದ ಮೊದಲ ಮತ್ತು ಇನ್ನಿಂಗ್ಸ್ ನ ಕೊನೆಯ ಎಸೆತವನ್ನು ಸಿಕ್ಸರ್ ಗೆ ಅಟ್ಟುವ ಮೂಲಕ ತಂಡಕ್ಕೆ ಭರ್ಜರಿ ಜಯ ತಂದುಕೊಂಟ್ಟರು. ಆ ಮೂಲಕ ಪಂಜಾಬ್ ತಂಡ 8 ವಿಕೆಟ್ ಗಳ ಅಂತರದಲ್ಲಿ ಬೆಂಗಳೂರು ತಂಡವನ್ನು ಮಣಿಸಿತು.
ಇನ್ನು ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಬೆಂಗಳೂರು ತಂಡ ನಾಯಕ ವಿರಾಟ್ ಕೊಹ್ಲಿ (48 ರನ್), ಆ್ಯರೋನ್ ಫಿಂಚ್ (20 ರನ್), ಶಿವಂ ದುಬೆ (23 ರನ್), ಕ್ರಿಸ್ ಮೋರಿಸ್ (ಅಜೇಯ 25 ರನ್) ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತು.
Follow us on Social media