ಮುಂಬೈ: ಜಗತ್ತಿನ ಶ್ರೀಮಂತ ಕ್ರಿಕೆಟ್ ಟೂರ್ನಿ ಐಪಿಎಲ್ ನ ಟಿವಿ ಮತ್ತು ಡಿಜಿಟಲ್ ಹಕ್ಕುಗಳು ದಾಖಲೆಯ ಮೊತ್ತಕ್ಕೆ ಮಾರಾಟವಾಗಿದೆ. ಇದರಿಂದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಬೊಕ್ಕಸಕ್ಕೆ ಭಾರಿ ಮೊತ್ತ ಹರಿದು ಬಂದಿದೆ.
ಐಪಿಎಲ್ 2023ರಿಂದ 2027ರವರೆಗಿನ ಎಲ್ಲಾ 410 ಪಂದ್ಯಗಳ ಪ್ರಸಾರ ಹಕ್ಕು ಬರೋಬ್ಬರಿ 44,075 ಕೋಟಿ ರೂಪಾಯಿಗೆ ಮಾರಾಟವಾಗಿದೆ. ಬಿಸಿಸಿಐ ಇದೇ ಮೊದಲ ಬಾರಿಗೆ ತನ್ನ ಪ್ರಸಾರ ಹಕ್ಕುಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಿ ಮಾರಾಟ ಮಾಡಿದೆ.
ಬಿಡ್-ವಿಜೇತರ ಹೆಸರುಗಳ ಬಗ್ಗೆ ಯಾವುದೇ ಅಧಿಕೃತ ದೃಢೀಕರಣವಿಲ್ಲದಿದ್ದರೂ ಮಾಧ್ಯಮಗಳ ವರದಿಗಳ ಪ್ರಕಾರ, ಟಿವಿ ಹಕ್ಕುಗಳನ್ನು ಸೋನಿ ₹ 23,575 ಕೋಟಿಗೆ ಹಾಗೂ ಡಿಜಿಟಲ್ ಹಕ್ಕುಗಳನ್ನು Viacom18 ₹ 20,500 ಕೋಟಿಗೆ ಗೆದ್ದಿದೆ ಎಂದು ವರದಿಯಾಗಿದೆ.
ಭಾರತೀಯ ಟೆಲಿವಿಷನ್ ಹಕ್ಕುಗಳು ಪ್ರತಿ ಪಂದ್ಯಕ್ಕೆ ₹ 57.5 ಕೋಟಿಗೆ ಮಾರಾಟವಾಗಿದ್ದರೆ, ಇಂಟರ್ನೆಟ್ ಹಕ್ಕುಗಳು ಪ್ರತಿ ಪಂದ್ಯಕ್ಕೆ ₹ 50 ಕೋಟಿಗೆ ಮಾರಾಟವಾಗಿವೆ. ಪ್ರತಿ ಪಂದ್ಯದ ಟಿವಿ ಮತ್ತು ಇಂಟರ್ನೆಟ್ ಹಕ್ಕುಗಳ ಮೌಲ್ಯ ₹107.5 ಕೋಟಿ ಆಗಿದೆ.
2017ರಲ್ಲಿ ಸ್ಟಾರ್ BCCIಗೆ ₹ 16,347 ಕೋಟಿ ಪಾವತಿಸಿತ್ತು. ಮಾಧ್ಯಮ ಹಕ್ಕುಗಳ ಮೂಲ ಬೆಲೆ ₹ 32,890 ಕೋಟಿ ಆಗಿದ್ದು, BCCI ಈ ಋತುವಿನಲ್ಲಿ ಕನಿಷ್ಠ ಎರಡು ಪಟ್ಟು ಹೆಚ್ಚು ಹಣವನ್ನು ಪಡೆಯುತ್ತದೆ ಎಂದು ಅಂದಾಜಿಸಲಾಗಿತ್ತು. ಟಿವಿ ಮತ್ತು ಡಿಜಿಟಲ್ ಹಕ್ಕುಗಳನ್ನು ₹ 44,075 ಕೋಟಿಗೆ ಹರಾಜು ಮಾಡಲಾಗಿದೆ (2017 ರಲ್ಲಿ ಸ್ಟಾರ್ ಪಾವತಿಸಿದ್ದಕ್ಕಿಂತ ಸುಮಾರು ಮೂರು ಪಟ್ಟು) ಈಗ ಬಿಸಿಸಿಐ ₹ 50,000 ಕೋಟಿಗಿಂತ ಹೆಚ್ಚು ಗಳಿಸುವ ಹಾದಿಯಲ್ಲಿದೆ.
Follow us on Social media