ನವದೆಹಲಿ: ಏರ್ ಇಂಡಿಯಾದಲ್ಲಿ ವೆಚ್ಚ ಕಡಿತ ಅನಿವಾರ್ಯವಾಗಿದೆ ಎಂದು ಹೇಳುವ ಮೂಲಕ ಸಿಬ್ಬಂದಿಗಳ ವೇತನ ರಹಿತ ಕಡ್ಡಾಯ ರಜೆ ನೀಡುವ ಸಂಸ್ಥೆಯ ನಿರ್ಧಾರವನ್ನು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಸಮರ್ಥಿಸಿಕೊಂಡಿದ್ದಾರೆ.
ಈ ಬಗ್ಗೆ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಸಚಿವ ಹರ್ದೀಪ್ ಸಿಂಗ್ ಪುರಿ ಅವರು, ‘ಪ್ರತಿ ವರ್ಷವೂ ಷೇರು ಮಾರಾಟ ಮಾಡುವ ಮೂಲಕ ₹ 500 ಕೋಟಿ ಅಥವಾ 600 ಕೋಟಿ ರೂ ಹೂಡಿಕೆ ಮಾಡುವುದು ಸಮರ್ಥನೀಯವಲ್ಲ’ ಎಂದು ಹೇಳಿದ್ದಾರೆ. ಇದೇ ವೇಳೆ ಟಿಎಂಸಿ ಸಂಸದ ಡರೆಕ್ ಒ ಬ್ರಯಾನ್ ಅವರ, ‘ವೇತನ ರಹಿತ ರಜೆ ಯೋಜನೆಯು ಕಾರ್ಮಿಕ ಕಾಯ್ದೆಯ ಉಲ್ಲಂಘನೆಯಾಗಿದ್ದು, ಉನ್ನತಾಧಿಕಾರಿಗಳನ್ನು ರಕ್ಷಿಸಲು ಬೇರೆ ಸಿಬ್ಬಂದಿಯನ್ನು ಬಲಿಕೊಡಲಾಗುತ್ತಿದೆ’ ಎಂಬ ಟೀಕೆಗೆ ಉತ್ತರಿಸಿದ ಸಚಿವರು, ‘ಏರ್ ಇಂಡಿಯಾ ಸಂಸ್ಥೆಯು ಸರ್ಕಾರದಿಂದ ನೆರವು ಬಯಸಿದರೆ, ಅದನ್ನು ನೀಡಲು ಸದ್ಯಕ್ಕಂತೂ ಸಾಧ್ಯವಿಲ್ಲ. ಕೋವಿಡ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವ ಸಮಾಜದ ಬೇರೆ ಬೇರೆ ವರ್ಗಗಳಿಗೆ ಪರಿಹಾರ ನೀಡುವ ಬೇಡಿಕೆಯನ್ನು ಪೂರೈಸಬೇಕಿದೆ’ ಎಂದು ಹೇಳುವ ಮೂಲಕ ಸರ್ಕಾರದಿಂದ ನೆರವು ಸಿಗುವುದಿಲ್ಲ ಎನ್ನುವುದನ್ನೂ ಅವರು ತಿಳಿಸಿದ್ದಾರೆ.
ನಷ್ಟದ ಸುಳಿಯಲ್ಲಿ ಸಿಲುಕಿರುವ ಏರ್ ಇಂಡಿಯಾ ಒಟ್ಟು ನಷ್ಟ 70 ಸಾವಿರ ಕೋಟಿ ರೂ ನಷ್ಟ ಅನುಭವಿಸಿದೆ. 2018–19ರಲ್ಲಿಯೇ 8,500 ಕೋಟಿ ರೂ ನಷ್ಟ ಅನುಭವಿಸಿದೆ.
Follow us on Social media