ನವದೆಹಲಿ: ದೇಶದ ವಿವಿಧ ರಾಜ್ಯಗಳಿಂದ ತಮ್ಮ ತಮ್ಮ ಊರುಗಳಿಗೆ ಹೋಗಲು ಕಷ್ಟಪಡುತ್ತಿರುವ ವಲಸೆ ಕಾರ್ಮಿಕರ ರೈಲ್ವೆ ಪ್ರಯಾಣದ ವೆಚ್ಚವನ್ನು ಕಾಂಗ್ರೆಸ್ ಭರಿಸುವುದಾಗಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಕಟಿಸಿದ್ದಾರೆ.
ಈ ಸಂಬಂಧ ಎಲ್ಲಾ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಸಮಿತಿಗೆ ಆದೇಶ ಹೊರಡಿಸಿರುವ ಅವರು ಅಗತ್ಯವಿರುವ ವಲಸೆ ಕಾರ್ಮಿಕರಿಗೆ ಅವರವರ ಊರುಗಳಿಗೆ ಹೋಗಲು ರೈಲ್ವೆ ಪ್ರಯಾಣದ ವೆಚ್ಚವನ್ನು ಭರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಹೇಳಿದ್ದಾರೆ.
ದೇಶದ ಬಡವರಿಗೆ ಅಗತ್ಯವಿರುವ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಮಾಡುತ್ತಿರುವ ವಿನಮ್ರದ ಕೊಡುಗೆಯಿದು. ಈ ಸಮಯದಲ್ಲಿ ಕಾರ್ಮಿಕರ ನೆರವಿಗೆ ಬರುವುದು ಅತ್ಯಗತ್ಯವಾಗಿದೆ. ವಿದೇಶಗಳಲ್ಲಿ ಸಿಲುಕಿ ಹಾಕಿಕೊಂಡಿರುವ ಪ್ರಜೆಗಳನ್ನು ಭಾರತಕ್ಕೆ ಕರೆತರಲು ತೋರಿಸುವ ಆಸಕ್ತಿಯನ್ನು ಸರ್ಕಾರ ನಮ್ಮ ದೇಶದಲ್ಲಿರುವ ಬಡ, ನಿರ್ಗತಿಕ ವಲಸೆ ಕಾರ್ಮಿಕರ ಬಗ್ಗೆ ಏಕೆ ತೋರಿಸುತ್ತಿಲ್ಲ ಎಂದು ಸೋನಿಯಾ ಗಾಂಧಿ ಇದೇ ಸಂದರ್ಭದಲ್ಲಿ ಪ್ರಶ್ನಿಸಿದ್ದಾರೆ.
ವಲಸೆ ಕಾರ್ಮಿಕರನ್ನು ರೈಲಿನಲ್ಲಿ ಉಚಿತವಾಗಿ ಅವರ ಊರುಗಳಿಗೆ ಕಳುಹಿಸಿ ಎಂದು ಕಾಂಗ್ರೆಸ್ ಕೇಂದ್ರ ಸರ್ಕಾರ ಮತ್ತು ರೈಲ್ವೆ ಸಚಿವಾಲಯಗಳನ್ನು ಹಲವು ಬಾರಿ ಮನವಿ ಮಾಡಿಕೊಂಡರೂ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದ್ದಾರೆ.
Follow us on Social media