ಪಾಟ್ನಾ: ಬಿಹಾರ ರಾಜ್ಯರಾಜಕಾರಣದಲ್ಲಿ ಅಚ್ಚರಿಯ ಬೆಳವಣಿಗೆಯೊಂದರಲ್ಲಿ, ಮಹಾಘಟಬಂಧನ್ ಜತೆ ಕೈಜೋಡಿಸುವಂತೆ ಜೆಡಿಯು ಮುಖ್ಯಸ್ಥ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಗೆ ಪ್ರಮುಖ ವಿರೋಧ ಪಕ್ಷವಾದ ರಾಷ್ಟ್ರೀಯ ಜನತಾ ದಳ (ಆರ್ ಜೆಡಿ) ಆಫರ್ ನೀಡಿರುವುದಾಗಿ ವರದಿ ತಿಳಿಸಿದೆ.
ರಾಷ್ಟ್ರೀಯ ಜನತಾ ದಳದ ಮುಖಂಡ ಅಮರ್ ನಾಥ್ ಗಾಮಿ ಸಿಎಂ ನಿತೀಶ್ ಕುಮಾರ್ ಗೆ ಈ ಆಫರ್ ನೀಡಿದ್ದು, ವರದಿಯ ಪ್ರಕಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮಹಾಘಟಬಂಧನ್ ಜತೆ ಕೈಜೋಡಿಸುವ ಮೂಲಕ ಕೇಂದ್ರದ ವಿರುದ್ಧದ ತೃತೀಯ ರಂಗವನ್ನು ಮುನ್ನಡೆಸಲಿ ಎಂದು ತಿಳಿಸಿದ್ದಾರೆ.
ಬಿಹಾರದಲ್ಲಿ ಎನ್ ಡಿಎ ಸರ್ಕಾರ ದೀರ್ಘಕಾಲ ಆಡಳಿತ ನಡೆಸುವುದಿಲ್ಲ. ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯ ಫಲಿತಾಂಶದಲ್ಲಿ ಮೋಸ ಮಾಡುವ ಮೂಲಕ ಎನ್ ಡಿಎ ಬಹುಮತ ಪಡೆದುಕೊಂಡಿರುವುದಾಗಿ ಅಮರ್ ನಾಥ್ ಆರೋಪಿಸಿದ್ದಾರೆ.
ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿರುವುದರಿಂದ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ಶೀಘ್ರದಲ್ಲಿಯೇ ಪತನವಾಗಲಿದೆ. ಬಿಹಾರದಲ್ಲಿ ಎನ್ ಡಿಎ ಸರ್ಕಾರ ಪತನವಾದ ನಂತರ ಆರ್ ಜೆಡಿ ಮುಖಂಡ ತೇಜಸ್ವಿ ಯಾದವ್ ನೂತನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಗಾಮಿ ವಿಶ್ವಾಸವ್ಯಕ್ತಪಡಿಸಿದ್ದಾರೆ.
243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಎನ್ ಡಿಎ ಮೈತ್ರಿಕೂಟ 126 ಸ್ಥಾನಗಳನ್ನು ಪಡೆದುಕೊಂಡಿದೆ. ಭಾರತೀಯ ಜನತಾ ಪಕ್ಷ 74 ಸ್ಥಾನಗಳಲ್ಲಿ, ಜೆಡಿಯು 43, ಎಚ್ ಎಎಂ(ಹಿಂದೂಸ್ತಾನ್ ಅವಾಂ ಮೋರ್ಚಾ) 4 ಸ್ಥಾನ, ವಿಐಪಿ(ವಿಕಾಸ್ ಇನ್ಸಾನ್ ಪಾರ್ಟಿ) 04 ಸ್ಥಾನ ಹಾಗೂ ಪಕ್ಷೇತರರ ಶಾಸಕರ ಬೆಂಬಲ ಎನ್ ಡಿಎ ಮೈತ್ರಿಕೂಟಕ್ಕಿದೆ.
ಮಹಾಘಟಬಂಧನ್ 110 ಸ್ಥಾನ ಪಡೆದಿದ್ದು, ರಾಷ್ಟ್ರೀಯ ಜನತಾದಳ 75 ಸ್ಥಾನ, ಕಾಂಗ್ರೆಸ್ ಪಕ್ಷ 19, ಎಡಪಕ್ಷಗಳು 16 ಸ್ಥಾನಗಳಲ್ಲಿ ಅಸಾದುದ್ದೀನ್ ಒವೈಸಿಯ ಎಐಎಂಐಎಂ 05 ಸ್ಥಾನಗಳಲ್ಲಿ ಬಿಎಸ್ಪಿ 01, ಎಲ್ ಜೆಪಿ 01 ಸ್ಥಾನದಲ್ಲಿ ಜಯ ಸಾಧಿಸಿದೆ.
Follow us on Social media