ಕೊಣಾಜೆ : ಮೆಹಂದಿ ದಿನ ವರ ನಾಪತ್ತೆಯಾಗಿದ್ದು, ಮದುವೆ ಕಾರ್ಯಕ್ರಮ ರದ್ದಾಗಿರುವ ಘಟನೆ ತೌಡುಗೋಳಿ ವರ್ಕಾಡಿಯ ಮನೆಯೊಂದರಲ್ಲಿ ನಡೆದಿದೆ.
ತೌಡುಗೋಳಿ-ವರ್ಕಾಡಿ ದೇವಂದ ಪಡ್ಪುವಿನ ಉದ್ಯಮಿಯೊಬ್ಬರ ಪುತ್ರ ಕಿಶನ್ ಶೆಟ್ಟಿ (28) ನಾಪತ್ತೆಯಾದ ವರ.
ಜೂ.1ರ ಗುರುವಾರ ಕಿಶನ್ ಶೆಟ್ಟಿ ಅವರಿಗೆ ಉಪ್ಪಳ ಮೂಲದ ಯುವತಿಯೊಂದಿಗೆ ವಿವಾಹ ನಿಗದಿಯಾಗಿತ್ತು. ವಧುವಿನ ಮನೆಯಲ್ಲಿ ಮೆಹಂದಿ ಶಾಸ್ತ್ರ ಮುಗಿದಿದ್ದು ವರನ
ಮನೆಯಲ್ಲಿ ಮಂಗಳವಾರ ನಡೆಯಬೇಕಿದ್ದ ಮೆಹಂದಿ ಶಾಸ್ತ್ರಕ್ಕೆ ಎಲ್ಲ ವ್ಯವಸ್ಥೆ ಮಾಡಲಾಗಿತ್ತು.
ಮಂಗಳವಾರ ಮಧ್ಯಾಹ್ನ ಹಣ್ಣು ತರಲೆಂದು ವರ ಸ್ಕೂಟರ್ ಏರಿ ಮನೆಯಿಂದ ಹೊರಟಿದ್ದ.ಆ ಬಳಿಕ ದೇರಳಕಟ್ಟೆ ತಲುಪುತ್ತಿದ್ದಂತೆಯೇ ಪೊಲೀಸ್ ಮೂಲಗಳ ಪ್ರಕಾರ ಸುಮಾರು ಅರ್ಧ ತಾಸು ಯಾರಲ್ಲೋ ಫೋನಲ್ಲಿ ಮಾತನಾಡಿದ್ದನಂತೆ.ಆ ಬಳಿಕ ನಾಪತ್ತೆಯಾದ ವರ ಇನ್ನೂ ಮನೆಗೆ ಬಂದಿಲ್ಲ ಎನ್ನಲಾಗಿದೆ.
ಎರಡೂ ಕುಟುಂಬ ಆರ್ಥಿಕವಾಗಿ ಸ್ಥಿತಿವಂತರಾಗಿದ್ದು, ಕಿಶನ್ ಯುವತಿಯೊಬ್ಬಳನ್ನು ಕಾಲೇಜು ದಿನಗಳಿಂದಲೇ ಪ್ರೀತಿಸುತ್ತಿದ್ದು, ಇದೇ ಕಾರಣಕ್ಕೆ ನಾಪತ್ತೆಯಾಗಿರುವ ಸಾಧ್ಯತೆಯ ಬಗ್ಗೆ ಪೊಲೀಸ್ ಮೂಲಗಳು ತಿಳಿಸಿವೆ.
ಈ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾದ ಕಿಶನ್ ಗಾಗಿ ಹುಡುಕಾಟ ಮುಂದುವರಿದಿದೆ.
Follow us on Social media