ಉಳ್ಳಾಲ: ಸಮಾರಂಭವೊಂದರಿಂದ ವಾಪಸ್ಸಾಗುತ್ತಿದ್ದ ರಿಕ್ಷಾ ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಉರುಳಿದ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಅಸೈಗೋಳಿ ವೈಭವ್ ಬಾರ್ ಎದುರುಗಡೆ ನಿನ್ನೆ ರಾತ್ರಿ ವೇಳೆ ಸಂಭವಿಸಿದೆ.
ಘಟನೆಯಲ್ಲಿ ರಿಕ್ಷಾದೊಳಗಿದ್ದ ನಾಲ್ವರು ಅಲ್ಪಗಾಯಗಳಿಂದ ಪಾರಾಗಿದ್ದು, ಸ್ಥಳೀಯರು ಹಾಗೂ ಕೊಣಾಜೆ ಪೊಲೀಸರು ತಕ್ಷಣಕ್ಕೆ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಜೊತೆಗೆ ಕರ್ತವ್ಯ ಮೆರೆದರು.
ಇನೋಳಿ ಯಲ್ಲಿ ನಡೆಯುತ್ತಿದ್ದ ಮದುವೆಯ ರೋಸ್ ಸಮಾರಂಭಕ್ಕೆ ರಿಕ್ಷಾ ಚಾಲಕ ಸಹಿತ ಮೂವರ ಕುಟುಂಬ ರೋಸ್ ಸಮಾರಂಭಕ್ಕೆ ಆಗಮಿಸಿತ್ತು. ತಡರಾತ್ರಿ ಅಡ್ಯಾರ್ ಕಡೆಗೆ ರಿಕ್ಷಾದಲ್ಲಿ ಕುಟುಂಬ ವಾಪಸ್ಸಾಗುವ ವೇಳೆ ರಿಕ್ಷಾ ಚಾಲಕನ ನಿಯಂತ್ರಣ ತಪ್ಪಿ ಅಸೈಗೋಳಿ ಜಂಕ್ಷನ್ನಿನಲ್ಲಿ ರಸ್ತೆಗೆ ಉರುಳಿದೆ.
ರಿಕ್ಷಾದೊಳಗಿದ್ದ ಒಂದೇ ಕುಟುಂಬದ ಓರ್ವ ವೃದ್ದ ಮಹಿಳೆ, ಇನ್ನೋರ್ವ ಮಹಿಳೆ ಹಾಗೂ ಓರ್ವ ಪುರುಷ ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡರು. ತಕ್ಷಣ ಸ್ಥಳದಲ್ಲೇ ಇದ್ದ ಸಾರ್ವಜನಿಕರು ಹಾಗೂ ಅಲ್ಲೇ ಇದ್ದ ಕೊಣಾಜೆ ಪೊಲೀಸರು ಕುಟುಂಬವನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
Follow us on Social media