ಕರಾಚಿ: ಪಾಕಿಸ್ತಾನದ ಬ್ಯಾಟ್ಸ್ ಮನ್ ಉಮರ್ ಅಕ್ಮಲ್ ಗೆ ವಿಧಿಸಲಾಗಿದ್ದ 3 ವರ್ಷಗಳ ನಿಷೇಧವನ್ನು 18 ತಿಂಗಳಿಗೆ ಇಳಿಕೆ ಮಾಡಲಾಗಿದೆ.
ಪಾಕಿಸ್ತಾನ ಪ್ರೀಮಿಯರ್ ಲೀಗ್‌ನಲ್ಲಿ ಉಮರ್ ಅಕ್ಮಲ್ ಪಾಲ್ಗೊಂಡಿದ್ದಾಗ ಫಿಕ್ಸಿಂಗ್ ಮಾಡಿಕೊಳ್ಳುವ ಕಾರಣಕ್ಕೆ ಬುಕ್ಕಿಗಳು ಎರಡು ಪ್ರತ್ಯೇಕ ಸಂದರ್ಭಗಳಲ್ಲಿ ಉಮರ್ ಅಕ್ಮಲ್ ಅವರನ್ನು ಸಂಪರ್ಕಿಸಿದ್ದರು. ಆದರೆ ಈ ವಿಚಾರವನ್ನು ಭ್ರಷ್ಟಾಚಾರ ನಿಗ್ರಹದಳಕ್ಕೆ ಮಾಹಿತಿ ನೀಡದ ಕಾರಣ ಉಮರ್ ಅಕ್ಮಲ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಆರೋಪಕ್ಕೆ ಸಂಬಂಧ ಪಟ್ಟಂತೆ ಪಿಸಿಬಿ ನೋಟಿಸ್ ನೀಡಿತ್ತು. ಇದಕ್ಕೆ ಸೂಕ್ತ ಉತ್ತರವನ್ನು ನೀಡುವಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ಉಮರ್ ಅಕ್ಮಲ್ ಶಿಕ್ಷೆಗೆ ಗುರಿಯಾಗಿದ್ದರು.
ಈ ನಿಷೇಧದ ಅವಧಿಯನ್ನು ಬುಧವಾರದಂದು 18 ತಿಂಗಳಿಗೆ ಇಳಿಕೆ ಮಾಡಲಾಗಿದೆ. ಫೆಬ್ರವರಿ 2020 ರಿಂದ 2021 ರ ಆಗಸ್ಟ್ ವರೆಗೆ ಅಕ್ಮಲ್ ವಿರುದ್ಧದ ನಿಷೇಧ ಚಾಲ್ತಿಯಲ್ಲಿರಲಿದೆ. ಈ ಆದೇಶದಿಂದ ಅಸಂತುಷ್ಟಗೊಂಡಿರುವ ಅಕ್ಮಲ್ ಮತ್ತೊಮ್ಮೆ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ.
ನನಗಿಂತಲೂ ಮುನ್ನ ಹಲವಾರು ಕ್ರಿಕೆಟಿಗರು ಈ ರೀತಿಯ ಅಪರಾಧವೆಸಗಿದ್ದಾರೆ. ಆದರೆ ಅವರ್ಯಾರಿಗೂ ಶಿಕ್ಷೆಯಾಗಿಲ್ಲ. ನನ್ನ ಶಿಕ್ಷೆಯ ಅವಧಿಯನ್ನು ಮತ್ತಷ್ಟು ಕಡಿಮೆ ಮಾಡುವುದಕ್ಕಾಗಿ ನಾನು ಮೇಲ್ಮನವಿ ಸಲ್ಲಿಸುತ್ತೇನೆ ಎಂದು ಅಕ್ಮಲ್ ತಿಳಿಸಿದ್ದಾರೆ.
Follow us on Social media