ಬೆಂಗಳೂರು: ಏ.17 ರಂದು ನಡೆಯುವ ಬೆಳಗಾವಿ ಲೋಕಸಭೆ, ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭಾ ಉಪಚುನಾವಣೆಗೆ ಸರ್ಕಾರ ಕೊರೋನಾ ಮಾರ್ಗಸೂಚಿಯನ್ನು ಪ್ರಕಟಿಸಿದ್ದು, ಮನೆ ಮನೆ ಪ್ರಚಾರಕ್ಕೆ ಕೇವಲ ಐದು ಮಂದಿಗಷ್ಟೇ ಅವಕಾಶ ನೀಡಿದೆ.
ರಾಜ್ಯದಲ್ಲಿ ದಿನಕಳೆಯುತ್ತಿದ್ದಂತೆಯೇ ಕೊರೋನಾ ಪ್ರಕರಣಗಳು ಏರಿಕೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದೊಂದಿಗೆ ಚರ್ಚಿಸಿ ಆರೋಗ್ಯ ಇಲಾಖೆಯು ಕೊರೋನಾ ಮಾರ್ಗಸೂಚಿಯನ್ನು ಪ್ರಕಟಿಸಿದೆ.
ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗುವ ಪ್ರತೀಯೊಬ್ಬರೂ ಮಾಸ್ಕ್, ಸಾಮಾಜಿಕ ಅಂತರ ಪಾಲನೆ ಮಾಡಬೇಕು. ಸಿಬ್ಬಂದಿ ಮತ್ತು ಮತದಾರರ ಥರ್ಮಲ್ ಸ್ಕ್ಯಾನಿಂಗ್ ನಡೆಸಬೇಕು ಎಂದು ಸೂಚಿಸಲಾಗಿದೆ. ನಾಮಪತ್ರ ಸಲ್ಲಿಸುವಾಗ ಅಭ್ಯರ್ಥಿ ಸೇರಿದಂತೆ ಇಬ್ಬರು ಇರಬೇಕು ಮತ್ತು ಎರಡು ವಾಹನಗಳಿಗೆ ಅನುಮತಿಯನ್ನು ನೀಡಲಾಗಿದೆ.
ಉಳಿದಂತೆ ನಾಮಪತ್ರದ ಫಾರಂ ಡೌನ್ ಲೋಡ್, ಅಫಿಡವಿಟ್, ಭದ್ರತಾ ಠೇವಣಿ ಮುಂತಾದವನ್ನು ಆನ್’ಲೈನ್ ಮೂಲಕವೇ ಸಲ್ಲಿಸಬಹುದಾಗಿದೆ. ಕೋವಿಡ್ ಪೀಡಿತರು, ಲಕ್ಷಣ ಇದ್ದವರು, ಕಂಟೈನ್ಮೆಂಟ್ ವಲಯದವರು, ಹೋಮ್ ಐಸೋಲೇಷನ್ ನಲ್ಲಿದ್ದವರಿಗೆ ಅವಕಾಶ ನೀಡಬೇಕು. ಕೋವಿಡ್ ರೋಗಿಗಳು ಪಿಪಿಇ ಕಿಟ್ ಧರಿಸಿ ನಿಗದಿತ ಆ್ಯಂಬುಲೆನ್ಸ್ ನಲ್ಲಿ ಬಂದು ಮತದಾನ ಮಾಡಬೇಕು.
ಈ ವೇಳೆ ಆರೋಗ್ಯ ಅಧಿಕಾರಿಯ ಮೇಲುಸ್ತುವಾರಿಯಲ್ಲಿ ಈ ಪ್ರಕ್ರಿಯೆ ನಡೆಯಬೇಕು. ಚುನಾವಣೆ ಸಭೆ, ಸಾರ್ವಜನಿಕ ಸಮಾರಂಭಗಳನ್ನು ಜಿಲ್ಲಾ ಚುನಾವಣಾಧಿಕಾರಿಗಳು ನಿಗದಿಪಡಿಸಿದ ಜಾಗದಲ್ಲೇ ಮಾಡಬೇಕು. ಅಲ್ಲಿ ಸಾಮಾಜಿಕ ಅಂತರ ಕಾಪಾಡಲು ವ್ಯವಸ್ಥೆ ಮಾಡಿರಬೇಕು. ಈ ಚಟುವಟಿಕೆ ಸಂದರ್ಭದಲ್ಲಿ ಕೋವಿಡ್ ಮುಂಜಾಗ್ರತಾ ಕ್ರಮಗಳ ಪಾಲನೆಯನ್ನು ಅಭ್ಯರ್ಥಿ ಮತ್ತು ಪಕ್ಷಗಳು ಖಾತರಿ ಮಾಡಬೇಕು. ಇದರ ಜತೆಗೆ 1500 ಮತದಾರರಿಗೆ ಒಂದು ಮತಗಟ್ಟೆಯ ಬದಲು 1000 ಮತದಾರರಿಗೆ 1 ಮತಗಟ್ಟೆ ಸ್ಥಾಪಿಸಲು ಆರೋಗ್ಯ ಇಲಾಖೆ ಸೂಚಿಸಿದೆ. ಬಹಿರಂಗ ಸಭೆಗೆ 200 ಜನರಿಗೆ ಮಿತಿಗೊಳಿಸಲಾಗಿದೆ. ಅಲ್ಲದೆ, ಪ್ರಚಾರದ ವೇಳೆ ಕೇಂದ್ರದ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಚುನಾವಣಾ ಆಯೋಗ ನಿರ್ದೇಶನ ನೀಡಿದೆ.
ಉಪಚುನಾವಣೆಗೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಸಾಕಷ್ಟು ಸಿದ್ಧತೆಗಳನ್ನು ನಡೆಸಿದ್ದು, ಮೂರು ಕ್ಷೇತ್ರಗಳಲ್ಲಿ ಭಾರೀ ಪ್ರಚಾರ ನಡೆಯಸಲು ಸಜ್ಜಾಗಿವೆ. ಮನೆ ಮನೆ ಪ್ರಚಾರ ನಡೆಸಿ ಜನರ ಮನವೊಲಿಸಲು ಮೂರು ಪಕ್ಷಗಳು ಸಿದ್ಧತೆ ನಡೆಸಿವೆ.
ಆರೋಗ್ಯ ಆಯುಕ್ತ ಡಾ.ಕೆ.ವಿ.ತ್ರಿಲೋಕ್ ಚಂದ್ರ ಅವರು ಮಾತನಾಡಿ, ಉಪಚುನಾವಣೆಗೆ ವಿವರಾತ್ಮಕ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ. ಪಕ್ಷಗಳು ಹಾಗೂ ಪಕ್ಷದ ಅಭ್ಯರ್ಥಿಗಳು ಕೊರೋನಾ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಬೇಕಿದೆ. ಪ್ರಚಾರದ ವೇಳೆ ನಿಯಮ ಉಲ್ಲಂಘನೆಯಾಗಿದ್ದೇ ಆದರೆ, ವಿಪತ್ತು ನಿರ್ವಹಣಾ ಕಾಯ್ದೆ 2005ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
Follow us on Social media