ಚೆನ್ನೈ: ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯಲ್ಲಿ ಭಾನುವಾರ ಸಂಭವಿಸಿದ ಹಿಮನದಿ ಸ್ಫೋಟದ ಬಳಿಕ ಸಾಗರೋಪಾದಿಯ ರಕ್ಷಣಾ ಕಾರ್ಯಾಚರಣೆ ನಿಟ್ಟಿನಲ್ಲಿ ಪಂದ್ಯದ ಸಂಭಾವನೆಯನ್ನು ದೇಣಿಗೆಯಾಗಿ ನೀಡುವುದಾಗಿ ಟೀಂ ಇಂಡಿಯಾ ವಿಕೆಟ್ ಕೀಪರ್- ಬ್ಯಾಟ್ಸ್ ಮನ್ ರಿಷಭ್ ಪಂತ್ ಘೋಷಿಸಿದ್ದಾರೆ. ಇತರರು ಕೂಡಾ ಮುಂದೆ ಬಂದು ಕೊಡುಗೆ ನೀಡಬೇಕೆಂದು ಅವರು ಪ್ರೋತ್ಸಾಹಿಸಿದ್ದಾರೆ.
ಚಮೋಲಿ ಜಿಲ್ಲೆಯ ಜೋಶಿಮಠದಲ್ಲಿ ಭಾನುವಾರ ಧೌಲಿ ಗಂಗಾ ನದಿಯಲ್ಲಿ ಭಾರಿ ಪ್ರವಾಹ ಉಂಟಾಗಿತ್ತು ಮತ್ತು ಹಿಮಾಲಯದ ಮೇಲ್ಭಾಗದಲ್ಲಿ ಅಪಾರ ಪ್ರಮಾಣದ ವಿನಾಶವಾಗಿದೆ.
ರಿಷಭ್ ಪಂತ್ ಉತ್ತರಾಖಂಡ ರಾಜ್ಯದ ಹರಿದ್ವಾರ ಜಿಲ್ಲೆಯ ರೂರ್ಕೆ ಪಟ್ಟಣದವರಾಗಿದ್ದಾರೆ. ಉತ್ತರ ಖಂಡದಲ್ಲಿ ಹಿಮಸ್ಫೋಟದಿಂದ ಆದ ಅನಾಹುತಗಳ ಬಗ್ಗೆ ತೀವ್ರ ನೋವಾಗುತ್ತಿದೆ. ರಕ್ಷಣಾ ಕಾರ್ಯಚಾರಣೆಗಾಗಿ ಪಂದ್ಯದ ಸಂಭಾವನೆಯನ್ನು ದೇಣಿಗೆಯಾಗಿ ನೀಡಲು ಇಷ್ಟಪಡುತ್ತೇನೆ. ಹೆಚ್ಚಿನ ಜನರು ಕೂಡಾ ನೆರವಿಗೆ ಮುಂದಾಗಿ ಎಂದು ಅವರು ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ.
ನೈಸರ್ಗಿಕ ವಿಪತ್ತಿನಲ್ಲಿ ಮೃತಪಟ್ಟವರ ಬಗ್ಗೆ ತೀವ್ರ ದು:ಖ ವ್ಯಕ್ತಪಡಿಸಿ ಭಾನುವಾರ ರಿಷಭ್ ಪಂತ್ ಟ್ವೀಟ್ ಮಾಡಿದ್ದರು. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ಮೂರನೇ ದಿನ 91 ರನ್ ಗಳಿಸಿದ ನಂತರ ರಿಷಭ್ ಪಂತ್ ಟ್ವಿಟ್ ಮಾಡಿದ್ದರು.
ವಿದ್ಯುತ್ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ 150ಕ್ಕೂ ಹೆಚ್ಚು ಜನರು ಕಣ್ಮರೆಯಾಗಿದ್ದು, ಅನೇಕ ಗ್ರಾಮಗಳ ಜನರನ್ನು ಭಾನುವಾರ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ.
Follow us on Social media