ಉಡುಪಿ : ಜಿಲ್ಲೆಯಲ್ಲಿಂದು 314 ಮಂದಿಗೆ ಕೊರೊನಾ ಸೋಂಕು ತಗುಲಿದ್ದು ಅತಿ ಹೆಚ್ಚು ಪಾಸಿಟಿವ್ ವರದಿಯಾದ ದಿನ ಇದಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 5,919 ಕ್ಕೆ ಏರಿಕೆಯಾಗಿದೆ. ಇಂದು ಐದು ಮಂದಿ ಸಾವನ್ನಪ್ಪಿದ್ದು ಇದುವರೆಗೆ ಒಟ್ಟು 60 ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.
ಇನ್ನು ಮೊದಲ ಬಾರಿಗೆ ಒಂದೇ ದಿನದ ಗಂಟಲುದ್ರವ ಮಾದರಿ ಸಂಗ್ರಹ 2 ಸಾವಿರ ದಾಟಿದ್ದು 2,030 ಮಂದಿಯ ಮಾದರಿಗಳನ್ನು ಸಂಗ್ರಹಿಸಲಾಗಿದೆ. 1,540 ವರದಿ ಇನ್ನಷ್ಟೇ ಲಭಿಸಬೇಕಿದೆ. ಹಾಗೆಯೇ ಇಂದು 314 ಮಂದಿಗೆ ಪಾಸಿಟಿವ್ ಆದರೆ 1,379 ಮಂದಿಗೆ ನೆಗೆಟಿವ್ ಆಗಿದೆ.
ಉಡುಪಿ ತಾಲೂಕಿನ 76 ವರ್ಷ, 77 ವರ್ಷ, 65 ವರ್ಷದವರು, 50 ವರ್ಷದ ಮಹಿಳೆ, ಕುಂದಾಪುರ ತಾಲೂಕಿನ 56 ವರ್ಷದವರು ಕೋವಿಡ್ ಸೋಂಕಿನಿಂದ ಮೃತಪಟ್ಟರು. ಇವರೆಲ್ಲರಿಗೂ ಬೇರೆ ಆರೋಗ್ಯದ ಸಮಸ್ಯೆಗಳಿದ್ದವು ಎಂದು ತಿಳಿದು ಬಂದಿದೆ.
ಶನಿವಾರ ಉಡುಪಿ ತಾಲೂಕಿನ 192, ಕುಂದಾಪುರ ತಾಲೂಕಿನ 87, ಕಾರ್ಕಳ ತಾಲೂಕಿನ 30, ಹೊರ ಜಿಲ್ಲೆಯ ಐವರಿಗೆ ಸೋಂಕು ದೃಢಪಟ್ಟಿದೆ. 89 ಮಂದಿ ಗುಣಮುಖರಾಗಿದ್ದು ಈ ಪೈಕಿ 59 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ 30 ಮಂದಿ ಹೋಮ್ ಐಸೊಲೇಶನ್‌ಗೆ ಒಳಪಟ್ಟಿದ್ದರು. ಪ್ರಸ್ತುತ 1,287 ಮಂದಿ ಆಸ್ಪತ್ರೆಗಳಲ್ಲಿ, 1,225 ಮಂದಿ ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Follow us on Social media