ಉಡುಪಿ: ನಗರದ ಸರಕಾರಿ ಆಸ್ಪತ್ರೆಯ ಎದುರು ನವಜಾತ ಶಿಶುವನ್ನು ಎಸೆದು ಹೋದ ಘಟನೆ ಸೋಮವಾರ ಮುಂಜಾನೆ ಬೆಳಕಿಗೆ ಬಂದಿದೆ.
ನಗರದ ಕೂಸಮ್ಮ ಶಂಭು ಶೆಟ್ಟಿ ಮತ್ತು ಹಾಜಿ ಅಬ್ದುಲ್ಲಾ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಎದುರು ಇರುವ ಮಾಂಸಹಾರಿ ಹೊಟೇಲ್ ಬಳಿಯ ತ್ಯಾಜ್ಯದ ಬುಟ್ಟಿಗೆ ನವಜಾತ ಹೆಣ್ಣು ಮಗುವನ್ನು ಎಸೆದು ಹೋಗಿದ್ದಾರೆ. ಇಂದು ಬೆಳಿಗ್ಗೆ ನಗರ ಸಭೆಯ ಸ್ವಚ್ಚತಾ ಸಿಬಂದಿಗಳು ಹೊಟೇಲ್‌ನವರು ಎಸೆದ ಬಾಳೆ ಎಲೆಯ ತ್ಯಾಜ್ಯದ ಸಂಗ್ರಹಿಸಲು ಬಂದಾಗ ಈ ಘಟನೆ ಹೊರ ಬಿದ್ದಿದೆ.
ತ್ಯಾಜ್ಯ ತುಂಬಿದ್ದ ಪೈಂಟ್ ಡಬ್ಬಿಯ ಒಳಗೆ ಬಾಳೆ ಎಲೆಯ ಮಧ್ಯೆ ಆಗಷ್ಟೇ ಜನ್ಮ ತಾಳಿದ ಶಿಶು ಕೂಗುವುದನ್ನು ಗಮನಿಸಿದ ಕಾರ್ಮಿಕರು ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಅವರು ತಕ್ಷಣ ಅಲ್ಲೇ ಇರುವ ಆಸ್ಪತ್ರೆಗೆ ಶಿಶುವನ್ನು ಆರೈಕೆಗೆ ತೆಗೆದುಕೊಂಡು ಹೋಗಿದ್ದಾರೆ. ಮಗು ಸದ್ಯ ಆರೋಗ್ಯವಾಗಿದೆಂದು ತಿಳಿದು ಬಂದಿದೆ.