ಉಡುಪಿ: ಮರವಂತೆ ಕಡಲ ತೀರದ ಬಳಿ ಅಕ್ರಮವಾಗಿ ಜಾನುವಾರಗಳನ್ನು ಸಾಗಣೆ ಮಾಡುತ್ತಿದ್ದ ಲಾರಿಯನ್ನು ತಡೆದಿರುವ ಗಂಗೋಳ್ಳಿ ಪೊಲೀಸರು, 18 ಜಾನುವಾರಗಳನ್ನು ರಕ್ಷಿಸಿದ್ದಾರೆ.
ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಮಾರ್ಗದರ್ಶನದಲ್ಲಿ ಬೈಂದೂರು ಸರ್ಕಲ್ ಇನ್ಸ್ ಪೆಕ್ಟರ್ ಸಂತೋಷ್ ಕೈಕಿಣಿ, ಎಸ್ ಐ ಭೀಮಾಶಂಕರ್ ಎಸ್ ಸಂಗಣ್ಣ, ಜಾನುವಾರುಗಳನ್ನು ಸಾಗಿಸುತ್ತಿದ್ದ ಟ್ರಕ್ ನ್ನು ಬೆನ್ನಟ್ಟಿ ಪರಿಶೀಲಿಸಿದಾಗ ಉಸಿರಾಟದ ತೊಂದರೆಯಿಂದಾಗಿ ಎರಡು ಜಾನುವಾರು ಮೃತಪಟ್ಟಿದ್ದು, ಉಳಿದ 16 ಜಾನುವಾರುಗಳು ಸ್ಥಳವಕಾಶದ ಕೊರತೆಯಿಂದ ತೊಂದರೆ ಅನುಭವಿಸುತಿದದ್ದು ಕಂಡುಬಂದಿತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ರಾಘವೇಂದ್ರ ಮತ್ತು ಹಾಸನದ ನಜಾರುಲ್ಲಾ ಎಂಬರನ್ನು ಪೊಲೀಸರು ಬಂಧಿಸಿದ್ದಾರೆ. ರಕ್ಷಿಸಲಾದ ಗೋವುಗಳನ್ನು ಉಡುಪಿಯ ನೀಲಾವಾರ ಗೋಶಾಲೆಗೆ ಸ್ಥಳಾಂತರಿಸಿದ್ದಾರೆ.
ಮಹಾರಾಷ್ಟ್ರದಿಂದ ಕಳ್ಳತನ ಮಾಡಲಾದ ಜಾನುವಾರುಗಳನ್ನು ಕೇರಳಕ್ಕೆ ಸಾಗಿಸಲಾಗುತಿತ್ತು. ಮಹಾರಾಷ್ಟ್ರದಿಂದ ಜಾನುವಾರಗಳನ್ನು ಸಾಗಣೆ ಮಾಡುತ್ತಿರುವ ಟ್ರಕ್ ಮರವಂತೆ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ತೆರಳುತ್ತಿರುವ ಬಗ್ಗೆ ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಲಾಯಿತು ಎಂದು ಪೊಲೀಸ್ ಮೂಲಗಳು ಹೇಳಿವೆ.ಜಾನುವಾರ ಹತ್ಯೆ ತಡೆ ಮತ್ತು ಸಂರಕ್ಷಣೆ ಕಾಯ್ದೆಯಡಿ ಈ ಸಂಬಂಧ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರೆದಿದೆ.
Follow us on Social media