Breaking News

ಉಡುಪಿ: ಚರ್ಚುಗಳಲ್ಲಿ ಜೂ.30ರವರೆಗೆ ಸಾಮೂಹಿಕ ಪೂಜೆ, ಪ್ರಾರ್ಥನೆ ನಡೆಸದಿರಲು ನಿರ್ಧಾರ

ಉಡುಪಿ: ಸರಕಾರ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಜೂನ್ 8 ರಿಂದ ಅವಕಾಶ ನೀಡಿದರೂ ಉಡುಪಿ ಜಿಲ್ಲೆಯಲ್ಲಿ ಚರ್ಚುಗಳನ್ನು ಜೂನ್ 30 ರ ರವರೆಗೆ ಸಾಮೂಹಿಕ ಪೂಜೆ, ಪ್ರಾರ್ಥನೆಗಳು ನಡೆಸದಿರಲು ನಿರ್ಧರಿಸಲಾಗಿದೆ

ಈ ಕುರಿತ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಉಡುಪಿ ಜಿಲ್ಲಾ ಯುನೈಟೆಡ್ ಕ್ರಿಶ್ಚನ್ ಫೋರಂ ಅಧ್ಯಕ್ಷರು ಹಾಗೂ ಉಡುಪಿ ಕೆಥೊಲಿಕ್ ಧರ್ಮಪ್ರಾಂತ್ಯದ ಅಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಕೋವಿದ್-19 ಸೋಂಕಿನ ಕಾರಣದಿಂದ ಸಾಧಾರಣ 70 ದಿನಗಳಿಂದ ಯಾವುದೇ ಸಾಮೂಹಿಕ ಧಾರ್ಮಿಕ ಚಟುವಟಿಕೆಯಿಲ್ಲದೆ ಮುಚ್ಚಲ್ಪಟ್ಟಿದ್ದ ಚರ್ಚ್ಗಳನ್ನು ಜೂನ್ 8 ರಿಂದ ತೆರೆಯುವ ಆದೇಶವನ್ನು ಸರಕಾರವು ನೀಡಿದೆ. ಜನಹಿತಕ್ಕಾಗಿ ಈ ನಿರ್ಧಾರವನ್ನು ಪ್ರಕಟಿಸಿದ ಕರ್ನಾಟಕ ರಾಜ್ಯ ಸರಕಾರಕ್ಕೆ ಕೃತಜ್ಞತೆಗಳು.

ಲೊಕ್ಡೌನ್ ಆರಂಭವಾದಾಗ ದೇಶದಲ್ಲಿ ಕನಿಷ್ಠವಾಗಿದ್ದ ಕೊರೋನ ಪೀಡಿತರ ಸಂಖ್ಯೆ ಇಂದು ಎರಡೂವರೆ ಲಕ್ಷ ಮೀರಿದೆ. ಪ್ರತಿನಿತ್ಯ ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಸೋಂಕಿಗೆ ಒಳಗಾಗುತ್ತಿದ್ದಾರೆ. ನಮ್ಮ ರಾಜ್ಯ ಕರ್ನಾಟಕದಲ್ಲೂ ಇದೇ ಪರಿಸ್ಥಿತಿಯಿದೆ. ಇದೀಗ ಸೋಂಕಿತರ ಸಂಖ್ಯೆ 6,000 ತಲುಪುವುದರಲ್ಲಿದೆ. ಉಡುಪಿ ಜಿಲ್ಲೆಯಲ್ಲಿ ಆರಂಭದಲ್ಲಿ ಬೆರಳೆಣಿಕೆಯಷ್ಟು ಕೊರೋನ ಪೀಡಿತರ ಸಂಖ್ಯೆ ಇದ್ದು, ಹಸಿರು ವಲಯ ಎಂಬ ಹೆಗ್ಗಳಿಕೆ ಪಡೆದಿತ್ತು. ಆದರೆ ಕಳೆದ ಎರಡು-ಮೂರು ವಾರಗಳಲ್ಲಿ ಕೊರೋನ ಪೀಡಿತರ ಸಂಖ್ಯೆ ಶೀಘ್ರವಾಗಿ ಹೆಚ್ಚಾಗಿ ಇದೀಗ ಸಾವಿರದ ಆಸುಪಾಸಿನಲ್ಲಿದೆ ಮಾತ್ರವಲ್ಲ, ರಾಜ್ಯದಲ್ಲಿ ಪ್ರಥಮ ಸ್ಥಾನವನ್ನು ತಲುಪಿದೆ.

ಈ ವಿಷಯಗಳನ್ನು ಮನಗಂಡು, ಮುಚ್ಚಿರುವ ಚರ್ಚ್ಗಳನ್ನು ತೆರೆದು, ನಿಯಮಾವಳಿಗಳಿಗೆ ಅನುಸಾರವಾಗಿ ಪೂಜೆ, ಇನ್ನಿತರ ಧಾರ್ಮಿಕ ಕಾರ್ಯಗಳನ್ನು ನಡೆಸಲು ರಾಜ್ಯ ಸರ್ಕಾರವು ಅನುಮತಿ ನೀಡಿರುವುದಾದರೂ, ಭಕ್ತಾದಿಗಳ ಆರೋಗ್ಯ ಹಾಗೂ ಸುರಕ್ಷತೆಗೆ ಗರಿಷ್ಠ ಆದ್ಯತೆಯನ್ನು ನೀಡಿ, ಉಡುಪಿ ಜಿಲ್ಲೆಯ ಮೂರೂ ತಾಲ್ಲೂಕುಗಳಲ್ಲಿರುವ ಯಾವುದೇ ಚರ್ಚ್ನಲ್ಲಿ ಜೂನ್ 30 ರವರೆಗೆ ಸಾಮೂಹಿಕ ಪೂಜೆ, ಪ್ರಾರ್ಥನೆಗಳು ನಡೆಸದಿರಲು ನಿರ್ಧರಿಸಲಾಗಿದೆ. ಆದರೂ ಮುಂಜಾಗರೂಕತೆಯ ಕ್ರಮಗಳನ್ನು ಪಾಲಿಸುವ ಭಕ್ತಾದಿಗಳ, ವೈಯಕ್ತಿಕ ಭೇಟಿ ಹಾಗೂ ಪ್ರಾರ್ಥನೆಗಾಗಿ ಚರ್ಚ್ಗಳು ತೆರೆದಿರುತ್ತವೆ ಎಂದು ಉಡುಪಿ ಜಿಲ್ಲೆಯ ಕ್ರೈಸ್ತ ಸಮುದಾಯದ ಪರವಾಗಿ ಉಡುಪಿ ಕ್ರಿಶ್ಚನ್ ಫೋರಂ ಫಾರ್ ಹ್ಯೂಮನ್ ರೈಟ್ಸ್ ತಿಳಿಸಿದೆ.

ಉಡುಪಿ ಕಥೋಲಿಕ ಧರ್ಮಾಧ್ಯಕ್ಷರ ನಿವಾಸದಲ್ಲಿ ನಡೆದ ಸಭೆಯಲ್ಲಿ ಉಡುಪಿ ಕಥೋಲಿಕ ಧರ್ಮಪ್ರಾಂತ, ಚರ್ಚ್ ಆಫ್ ಸೌತ್ ಇಂಡಿಯ (ಸಿಎಸ್ಐ), ಯುನೈಟೆಡ್ ಬಾಸೆಲ್ ಮಿಷನ್ ಚರ್ಚಸ್ (ಯುಬಿಎಂ), ಫುಲ್ ಗೊಸ್ಪೆಲ್ ಪಾಸ್ಟರ್ಸ್ ಅಸೋಸಿಯೇಶನ್ ಹಾಗೂ ಇತರ ಕ್ರೈಸ್ತ ಸಭೆಗಳ ಧಾರ್ಮಿಕ ನಾಯಕರು ಹಾಜರಿದ್ದರು.

ಜೂನ್ 30 ರಷ್ಟಕ್ಕೆ, ಕೋವಿದ್-19 ಸೋಂಕಿನ ಪರಿಸ್ಥಿತಿಯನ್ನು ಪುನರ್-ಪರಿಶೀಲನೆ ಮಾಡಿ, ಮುಂದಿನ ವ್ಯವಸ್ಥೆಯ ಬಗ್ಗೆ ನಿರ್ಧರಿಸುವುದಾಗಿ ಹೇಳಿಕೆಯಲ್ಲಿ ತಿಳಿಸಲಾಗಿದೆ. ಕೋವಿದ್-19 ಸೋಂಕು ಇನ್ನೊಬ್ಬರಿಗೆ ತಗುಲದಂತೆ ಗರಿಷ್ಠ ಪ್ರಮಾಣದಲ್ಲಿ ಎಚ್ಚರಿಕೆ ವಹಿಸುವುದು, ನಾವು ಪರರಿಗೆ ತೋರಿಸುವ ಪ್ರೀತಿ ಹಾಗೂ ಕಾಳಜಿಯ ಗುರುತು ಎಂದು ಕ್ರೈಸ್ತ ಧಾರ್ಮಿಕ ಮುಖಂಡರು ಒತ್ತಿ ಹೇಳಿದ್ದಾರೆ ಎಂದು ಅವರು ತಿಳಿಸಿದ್ದಾರೆ. 

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×