ಉಡುಪಿ: ನದಿಗೆ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರುಪಾಲಾಗಿರುವ ಘಟನೆ ಉಡುಪಿ ಜಿಲ್ಲೆಯ ಪಡುಬಿದ್ರೆ ಬಳಿಯ ಹೆಜಮಾಡಿ ಎಂಬಲ್ಲಿ ನಡೆದಿದೆ.
ಹೆಜಮಾಡಿ ಎನ್.ಎಸ್. ರಸ್ತೆಯ ನಿವಾಸಿಗಳಾದ ಮುಹ್ಸಿನ್ (16) ಹಾಗೂ ಮುಹಮ್ಮದ್ ರಾಯಿಸ್ (16) ನೀರುಪಾಲಾದವರು. ಹೆಜಮಾಡಿಯ ಕಾಮಿನಿ ನದಿಗೆ ಮೂವರು ಯುವಕರು ಈಜಲು ಹೋದಾಗ ಈ ದುರ್ಘಟನೆ ನಡೆದಿದೆ.
ನೀರಿನ ಸೆಳೆತಕ್ಕೆ ಸಿಲುಕಿ ಮೂವರು ನೀರಿನಲ್ಲಿ ಮುಳುಗಿದ್ದಾರೆ. ಈ ವೇಳೆ ಸ್ಥಳೀಯರು ತಕ್ಷಣ ಮೂವರನ್ನೂ ನೀರಿನಿಂದ ಮೇಲಕ್ಕೆತ್ತಿದ್ದಾರೆ.
ಆದರೆ ಅಷ್ಟರಲ್ಲಿ ಓರ್ವ ಮೃತಪಟ್ಟಿದ್ದು, ಮತ್ತೊಬ್ಬ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ಮುಹಮ್ಮದ್ ನಬೀಲ್ ಎಂಬಾತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
Follow us on Social media