ನವದೆಹಲಿ: ಪ್ರತಿವರ್ಷ ಸ್ವಾತಂತ್ರ್ಯ ದಿನಾಚರಣೆ ಎಂದರೆ ಮಕ್ಕಳಿಗೆ ಎಲ್ಲಿಲ್ಲದ ಖುಷಿ. ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಒಪ್ಪವಾದ ಸಮವಸ್ತ್ರ ಧರಿಸಿ ತ್ರಿವರ್ಣದ ಬ್ಯಾಂಡ್ ತೊಟ್ಟು ಭಾರತದ ತ್ರಿವರ್ಣ ಧ್ವಜ ಹಿಡಿದುಕೊಂಡು ಶಾಲೆಗೆ ಲಗುಬಗೆಯಿಂದ ಹೋಗುತ್ತಾರೆ.
ಶಾಲೆಯಲ್ಲಿ ಮೈದಾನದಲ್ಲಿ ತ್ರಿವರ್ಣ ಧ್ವಜ ಹಿಡಿದುಕೊಂಡು ಸಾಲಿನಲ್ಲಿ ನಿಂತು ಎನ್ ಸಿಸಿ ಕೆಡೆಟ್ ಗಳ ಪಠ ಸಂಚಲನ, ಬ್ಯಾಂಡ್, ಅತಿಥಿಗಳ ಭಾಷಣ ಕೇಳುವುದು, ಸಾಂಸ್ಕೃತಿಕ ಕಾರ್ಯಕ್ರಮ ನೋಡುವುದು, ರಾಷ್ಟ್ರಗೀತೆ ನಂತರ ಎಲ್ಲ ಗೆಳೆಯ-ಗೆಳತಿಯರ ಜೊತೆ ಸೇರಿಕೊಂಡು ಸ್ವಾತಂತ್ರ್ಯ ದಿನಾಚರಣೆಯ ಸಿಹಿ ತಿನ್ನುವುದು ನಂತರ ಮನೆಗೆ ಹೋಗುವುದು, ಹೀಗೆ ಮಕ್ಕಳಿಗೆ ಖುಷಿಯೋ ಖುಷಿ.
ಆದರೆ ಈ ಬಾರಿ ಕೊರೋನಾದಿಂದಾಗಿ ಸ್ವಾತಂತ್ರ್ಯೋತ್ಸವ ದಿನಾಚರಣೆ ದೇಶದೆಲ್ಲೆಡೆ ಬಹಳ ಸರಳವಾಗಿ ನೆರವೇರುತ್ತಿದೆ. ದೆಹಲಿಯ ಐತಿಹಾಸಿಕ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ಪ್ರಧಾನಿ ಭಾಷಣ ಮಾಡಿದ್ದಾರೆ. ಈ ವರ್ಷ ಕೋವಿಡ್-19 ಹಿನ್ನೆಲೆಯಲ್ಲಿ ಮಕ್ಕಳಿಗೆ, ಸಾರ್ವಜನಿಕರಿಗೆ ಕೆಂಪು ಕೋಟೆಗೆ ಪ್ರವೇಶವಿಲ್ಲ. ಮಕ್ಕಳ ಆಕರ್ಷಕ ಪ್ರದರ್ಶನ ಈ ವರ್ಷ ಕಣ್ಮರೆಯಾಗಿದೆ.
ಬದಲಾಗಿ ಇಂದು 500 ಪೊಲೀಸ್ ಸಿಬ್ಬಂದಿ ಸೇರಿದಂತೆ 1500 ಕೊರೋನಾ ವಾರಿಯರ್ಸ್ ಗಳನ್ನು ಕೆಂಪು ಕೋಟೆ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಈ ವರ್ಷದ ಆಚರಣೆಗೆ ಮಕ್ಕಳು ಇಲ್ಲ ಎಂಬ ನೋವು ಪ್ರಧಾನಿ ಮೋದಿಯವರನ್ನೂ ಕಾಡಿದೆ. ತಮ್ಮ ಭಾಷಣದಲ್ಲಿ ಅದನ್ನು ಪ್ರಸ್ತಾಪಿಸಿದ್ದಾರೆ.
Follow us on Social media