ಅಬುಧಾಬಿ: ಮೂರು ಬಾರಿಯ ಚಾಂಪಿಯನ್ ಚೆನ್ನೈ ಸೂಪ್ ಕಿಂಗ್ಸ್ ಯುಎಇನಲ್ಲಿ ನಡೆಯುತ್ತಿರುವ ಐಪಿಎಲ್ 13ನೇ ಆವೃತ್ತಿಯ ಪ್ಲೇ ಆಫ್ ಹಂತದಿದ ಹೊರಬಿದ್ದಿದೆ. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಮಹೇಂದ್ರ ಸಿಂಗ್ ಧೋನಿ ಪಡೆ ಅಧಿಕೃತವಾಗಿ ಹೊರಬಿದ್ದಿದೆ.
ಟೂರ್ನಿಯ 45ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ 8 ವಿಕೆಟ್ ಗಳಿಂದ ಮುಂಬಯಿ ಇಂಡಿಯನ್ಸ್ ತಂಡವನ್ನು ಮಣಿಸುವುದರೊಂದಿಗೆ ಚೆನ್ನೈ ತಂಡದ ಪ್ಲೇ ಆಫ್ ಕನಸು ಭಗ್ನಗೊಂಡಿದೆ. ತನ್ನ ಹಿಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಭರ್ಜರಿ ಜಯ ಗಳಿಸಿದ ಚೆನ್ನೈ ಪ್ಲೇ ಆಫ್ ಹಂತಕ್ಕೆ ಕೂದಲೆಳೆಯ ಅವಕಾಶ ಹೊಂದಿತ್ತು.
ಆದರೆ ರಾಜಸ್ಥಾನ್ ತಂಡ ಇದಕ್ಕೆ ತೆರೆ ಎಳೆದಿದೆ. ಪ್ಲೇ ಆಫ್ ಹಂತಕ್ಕೇರುವ ಅಗ್ರ ನಾಲ್ಕು ತಂಡಗಳು ಕನಿಷ್ಠ 14 ಅಂಕ ಗಳಿಸಬೇಕಿದೆ. ಆದರೆ ಚೆನ್ನೈ ಆಡಿರುವ 12 ಪಂದ್ಯಗಳಿಂದ 8 ಅಂಕ ಹೊಂದಿದ್ದು, ಉಳಿದೆರಡು ಪಂದ್ಯಗಳಲ್ಲಿ ಗೆದ್ದರೂ ಒಟ್ಟು 12 ಅಂಕ ಗಳಿಸಲಷ್ಟೇ ಶಕ್ತಗೊಳ್ಳಲಿದೆ. ಹೀಗಾಗಿ ಧೋನಿ ಬಳಗದ ಪ್ಲೇ ಆಫ್ ಕನಸು ನುಚ್ಚು ನೂರಾಗಿದೆ.
ಐಪಿಎಲ್ ಇತಿಹಾಸದಲ್ಲಿ ನಾಯಕನಾಗಿ ಎಂಎಸ್ ಧೋನಿ ಎರಡನೇ ಬಾರಿಗೆ ಪ್ಲೇ ಆಫ್ ಹಂತಕ್ಕೇರದೆ ಟೂರ್ನಿಯಿಂದ ಹೊರ ನಡೆಯುತ್ತಿದೆ. 2016ರಲ್ಲಿ ಧೋನಿ ಮುನ್ನಡೆಸುತ್ತಿದ್ದ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡ ಪ್ಲೇ ಆಫ್ ಹಂತಕ್ಕೇರುವಲ್ಲಿ ವಿಫಲವಾಗಿತ್ತು.
ಇನ್ನು ಧೋನಿ ನಾಯಕನಾಗಿ ಚೆನ್ನೈ ತಂಡ ಇದೇ ಮೊದಲ ಬಾರಿಗೆ ಪ್ಲೇ ಆಫ್ ಹಂತಕ್ಕೇರುವ ಪ್ರಯತ್ನದಲ್ಲಿ ವಿಫಲವಾಗಿದೆ.
Follow us on Social media