ಇಂದೋರ್ : ನಗದು ಕಳವುಗೈದ ಆರೋಪದ ಮೇಲೆ ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ಬಾಲಕರಿಬ್ಬರನ್ನು ಥಳಿಸಿ ವಾಹನಕ್ಕೆ ಕಟ್ಟಿ ಎಳೆದೊಯ್ದ ಘಟನೆಗೆ ಸಂಬಂಧಿಸಿದಂತೆ ಮೂವರು ಶಂಕಿತ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
- ವಾಹನದಿಂದ ಹಣ ಕದ್ದಿದ್ದಾರೆಂದು ಆರೋಪಿಸಿ 13 ರಿಂದ 17 ವರ್ಷದ ಇಬ್ಬರು ಬಾಲಕರನ್ನು ಮೂವರು ಆರೋಪಿಗಳು ಶನಿವಾರ ಬಾಲಕರನ್ನು ಥಳಿಸಿ ವಾಹನಕ್ಕೆ ಕಟ್ಟಿ ಎಳೆದೊಯ್ದು ಚಿತ್ರಹಿಂಸೆ ನೀಡಿದ್ದರು. ವಾಹನಕ್ಕೆ ಕಟ್ಟಿ ಬಾಲಕರನ್ನು ಎಳೆದೊಯ್ಯುತ್ತಿದ್ದಂತೆ ಸ್ಥಳದಲ್ಲಿದ್ದವರು ಕಿರುಚಾಡಿ ವಾಹನ ನಿಲ್ಲಿಸಿದ್ದಾರೆ. ಪ್ರಕರಣದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಘಟನೆ ಸಂಬಂಧ ಮೂವರು ಶಂಕಿತರನ್ನು ವಶಕ್ಕೆ ಪಡೆಯಲಾಗಿದ್ದು, ಪ್ರಮುಖ ಆರೋಪಿ ಖಾಂಡ್ವಾ ಜಿಲ್ಲೆಯ ತರಕಾರಿ ವ್ಯಾಪಾರಿ ತಲೆಮರೆಸಿಕೊಂಡಿದ್ದಾನೆ. ಆತನ ಮನೆಗೆ ಬೀಗ ಹಾಕಲಾಗಿದ್ದು, ಕುಟುಂಬದವರೂ ನಾಪತ್ತೆಯಾಗಿದ್ದಾರೆ ಎಂದು ರಾಜೇಂದ್ರ ನಗರ ಪೊಲೀಸ್ ಠಾಣೆ ಪ್ರಭಾರಿ ಅಜಯ್ ಕುಮಾರ್ ಮಿಶ್ರಾ ಸೋಮವಾರ ತಿಳಿಸಿದ್ದಾರೆ.ಈ ವ್ಯಾಪಾರಿ ಶನಿವಾರ ಈರುಳ್ಳಿ ಮೂಟೆಗಳನ್ನು ಹೊತ್ತ ಸಣ್ಣ ಸರಕು ಸಾಗಣೆ ವಾಹನದಲ್ಲಿ ಇಂದೋರ್‌ನ ದೇವಿ ಅಹಲ್ಯಾಬಾಯಿ ಹೋಳ್ಕರ್ ಹಣ್ಣು-ತರಕಾರಿ ಮಾರುಕಟ್ಟೆಗೆ ಹೋಗಿದ್ದಾನೆ. ಈ ವೇಳೆ ಆತನ ವಾಹನದಲ್ಲಿದ್ದ ನಗದು ಕಳವಾಗಿದ್ದು, ಅದನ್ನು ಬಾಲಕರ ಮೇಲೆ ಆರೋಪ ಹೊರಿಸಿ ಕೃತ್ಯ ಎಸಗಿದ್ದಾನೆ ಎಂದು ಇನ್ನೋರ್ವ ಪೊಲೀಸ್ ಅಧಿಕಾರಿ ಹೇಳಿದ್ದಾರೆ.