ನವದೆಹಲಿ : ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ಕೊರೋನಾ ಪಾಸಿಟಿವ್ ಬಂದಿದ್ದರಿಂದ ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದು ಯುವ ವೇಗಿ ಜಸ್ ಪ್ರೀತ್ ಬುಮ್ರಾ ತಂಡವನ್ನು ಮುನ್ನಡೆಸಲಿದ್ದಾರೆ.
35 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಬೌಲರ್ ಒಬ್ಬರು ಟೀಂ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮರುನಿಗದಿಪಡಿಸಲಾದ ‘ಐದನೇ ಟೆಸ್ಟ್’ನಲ್ಲಿ ಭಾರತೀಯ ಟೆಸ್ಟ್ ತಂಡವನ್ನು ಮುನ್ನಡೆಸಲು ಜಸ್ ಪ್ರೀತ್ ಬುಮ್ರಾ ಸಿದ್ಧರಾಗಿದ್ದಾರೆ.
1987ರಲ್ಲಿ ಕಪಿಲ್ ದೇವ್ ಅವರು ಟೀಂ ಇಂಡಿಯಾವನ್ನು ಕೊನೆಯ ಬಾರಿಗೆ ಮುನ್ನಡೆಸಿದ್ದ ಬೌಲರ್ ಆಗಿದ್ದರು. ಜುಲೈ 1ರಿಂದ ಪ್ರಾರಂಭವಾಗುವ ಈ ಟೆಸ್ಟ್ ಪಂದ್ಯದಿಂದ ರೋಹಿತ್ ಹೊರಗುಳಿದಿದ್ದಾರೆ. ಕಾರಣ ಅವರ ಆರ್‌ಟಿ-ಪಿಸಿಆರ್ ಪರೀಕ್ಷೆಯು ಮತ್ತೊಮ್ಮೆ ಪಾಸಿಟಿವ್ ಬಂದಿದ್ದು ಅವರನ್ನೂ ಐಸೋಲೇಟ್ ಮಾಡಲಾಗಿದೆ. ಕೆಎಲ್ ರಾಹುಲ್ ಅನುಪಸ್ಥಿತಿಯಲ್ಲಿ ಉಪನಾಯಕರಲ್ಲಿ ಒಬ್ಬರಾಗಿರುವ ಜಸ್ಪ್ರೀತ್ ಬುಮ್ರಾ ಅವರು ಮುನ್ನಡೆಸಲಿದ್ದಾರೆ.
ಭಾರತ 1932ರಲ್ಲಿ ಮೊದಲ ಟೆಸ್ಟ್ ಪಂದ್ಯವನ್ನಾಡಿದ್ದು ಜಸ್ ಪ್ರೀತ್ ಬುಮ್ರಾ ತಂಡವನ್ನು ಮುನ್ನಡೆಸುತ್ತಿರುವ 36ನೇ ಕ್ರಿಕೆಟಿಗನಾಗಲಿದ್ದಾರೆ. ಗುಜರಾತ್ ವೇಗಿ 29 ಟೆಸ್ಟ್‌ಗಳಲ್ಲಿ 123 ವಿಕೆಟ್‌ಗಳನ್ನು ಪಡೆದಿದ್ದು, ವಿಶ್ವದ ಅತ್ಯುತ್ತಮ ವೇಗದ ಬೌಲರ್‌ಗಳಾಗಿ ಬೆಳೆದಿದ್ದಾರೆ. ಆಯ್ಕೆಗಾರರ ಅಧ್ಯಕ್ಷ ಚೇತನ್ ಶರ್ಮಾ ಅವರನ್ನು ಭವಿಷ್ಯದ ನಾಯಕನಾಗಿ ರೂಪಿಸಲಾಗುತ್ತಿದೆ ಎಂದು ಈಗಾಗಲೇ ಹೇಳಿದ್ದರು.
Follow us on Social media