ನವದೆಹಲಿ: ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿರುವ ಟೀಂ ಇಂಡಿಯಾದಲ್ಲಿ ರೋಹಿತ್ ಶರ್ಮ ಏಕಿಲ್ಲ? ಎಂಬ ಪ್ರಶ್ನೆ ಸದ್ಯಕ್ಕೆ ಸಾಮಾಜಿಕ ಜಾಲ ತಾಣಗಳಲ್ಲಿ ಹರದಾಡಿತ್ತಿದೆ. ಅಭಿಮಾನಿಗಳು, ಕ್ರಿಕೆಟ್ ಪಂಡಿತರು ಈ ಬಗ್ಗೆ ಚರ್ಚೆ ನಡೆಸುತ್ತಿರುವ ಹೊತ್ತಿನಲ್ಲೇ ರೋಹಿತ್ ಶರ್ಮ ಅವರು ತಮ್ಮದೇ ಆದ ರೀತಿಯಲ್ಲಿ ಬಿಸಿಸಿಐ ಆಯ್ಕೆ ಸಮಿತಿಗೆ ತಿರುಗೇಟು ನೀಡಿದ್ದಾರೆ.
ಐಪಿಎಲ್ 2020ರಲ್ಲಿ ಮುಂಬೈ ಇಂಡಿಯನ್ಸ್ ಮುನ್ನಡೆಸುತ್ತಿರುವ ರೋಹಿತ್ ಶರ್ಮರನ್ನು ಆಸ್ಟ್ರೇಲಿಯಾ ಸರಣಿಗಾಗಿ ಪ್ರಕಟಿಸಿರುವ ತಂಡಕ್ಕೆ ಪರಿಗಣಿಸಿಲ್ಲ. ರೋಹಿತ್ ಶರ್ಮರ ದೈಹಿಕ ಕ್ಷಮತೆ ಬಗ್ಗೆ ಫಿಟ್ನೆಸ್ ತಜ್ಞರ ವರದಿ ಬಂದ ಬಳಿಕ ಈ ಬಗ್ಗೆ ಅಂತಿಮ ನಿರ್ಣಯ ಹೊರಬರಬಹುದು. ಆದರೆ, ಫಿಟ್ನೆಸ್ ವಿಷಯಕ್ಕೆ ರೋಹಿತ್ ರನ್ನು ಕೈಬಿಡಲಾಗಿದೆ ಎಂದು ಬಿಸಿಸಿಐ ಆಯ್ಕೆ ಸಮಿತಿ ಸ್ಪಷ್ಟಪಡಿಸಿಲ್ಲ.
ಹೀಗಾಗಿ, ಗೊಂದಲದ ಸನ್ನಿವೇಶದಲ್ಲಿ ಬಿಸಿಸಿಐ ಆಯ್ಕೆ ಸಮಿತಿ ತೆಗೆದುಕೊಂಡ ನಿರ್ಣಯಕ್ಕೆ ಬದಲಾಗಿ ಮುಂಬೈ ಇಂಡಿಯನ್ಸ್ ನಿನ್ನೆ ಫೋಟೊ ಹಂಚಿಕೊಂಡು ಉತ್ತರ ನೀಡಿತ್ತು. ಇಂದು ರೋಹಿತ್ ಶರ್ಮ ಅವರು ತಮ್ಮ ಟ್ವಿಟ್ಟರ್ ಸ್ವವಿವರ ಜಾಗದಲ್ಲಿ ಇಂಡಿಯನ್ ಕ್ರಿಕೆಟರ್ ಎಂಬುದನ್ನು ತೆಗೆದು ಹಾಕಿದ್ದಾರೆ.
ಟೀಂ ಇಂಡಿಯಾದ ಏಕದಿನ ಕ್ರಿಕೆಟ್ ತಂಡದ ಉಪ ನಾಯಕರಾಗಿದ್ದ ರೋಹಿತ್ ಅವರು ಐಪಿಎಲ್ 2020ರಲ್ಲಿ ಸ್ನಾಯು ಸೆಳೆತಕ್ಕೆ ಸಿಲುಕಿ ಕಣಕ್ಕಿಳಿಯಲು ಆಗಿಲ್ಲ. ಕೀರನ್ ಪೊಲಾರ್ಡ್ ಅವರು ಮುಂಬೈ ತಂಡವನ್ನು ಮುನ್ನಡೆಸುತ್ತಿದ್ದಾರೆ. ರೋಹಿತ್ ಗಾಯದ ಸಮಸ್ಯೆಯ ಬಗ್ಗೆ ಹೆಚ್ಚಿನ ಮಾಹಿತಿ ಲಭಿಸುವ ಮುನ್ನವೇ ಗಾಯದ ಮೇಲೆ ಬರೆ ಎಳೆದಂತೆ ಟೀಂ ಇಂಡಿಯಾ ಆಯ್ಕೆಗೆ ಪರಿಗಣಿಸಿಲ್ಲ.
Follow us on Social media