Breaking News

ಆರ್ಥಿಕ ಪ್ರಗತಿಗಾಗಿ ವಿದೇಶಿ ನೇರ ಹೂಡಿಕೆಗೆ ಉತ್ತೇಜನ: ಸಿಎಂ ಯಡಿಯೂರಪ್ಪ

ಬೆಂಗಳೂರು: ಹೆಚ್ಚಿನ ಆರ್ಥಿಕ ಪ್ರಗತಿ ಸಾಧಿಸುವ ಉದ್ದೇಶದಿಂದ ಎಲ್ಲಾ ಕ್ಷೇತ್ರಗಳಲ್ಲಿ ವಿದೇಶಿ ಕಂಪನಿಗಳ ನೇರ ಹೂಡಿಕೆಯನ್ನು ರಾಜ್ಯ ಸರ್ಕಾರ ಉತ್ತೇಜಿಸುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದ್ದಾರೆ.

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಬುಧವಾರ ಆಯೋಜಿಸಿದ್ದ ಇಂಡೋ-ಜಪಾನಿಸ್ ಬಿಸಿನೆಸ್ ಫೋರಂನಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಪಾನಿನ ಕಂಪನಿಗಳಿಂದ ನೇರ ಹೂಡಿಕೆಗೆ ಎಲ್ಲಾ ರೀತಿಯ ಸಹಕಾರ ಒದಗಿಸುವುದಾಗಿ ಭರವಸೆ ನೀಡಿದರು. ಅಲ್ಲದೆ, ಹೂಡಿಕೆಗೆ ಕರ್ನಾಟಕ ಸೂಕ್ತ ಸ್ಥಳ ಹೇಗೆ ಮತ್ತು ಅದಕ್ಕಾಗಿ ಸರ್ಕಾರ ಕೈಗೊಂಡಿರುವ ಕಾರ್ಯಕ್ರಮಗಳೇನು ಎಂಬುದನ್ನು ಜಪಾನಿ ನಿಯೋಗಕ್ಕೆ ಮನವರಿಕೆ ಮಾಡಿಕೊಟ್ಟರು.

ಉದ್ಯಮ ಕ್ಷೇತ್ರದಲ್ಲಿ ಕರ್ನಾಟಕ ಮತ್ತು ಜಪಾನ್ ನಡುವಿನ ಔದ್ಯಮಿಕ ಸಂಬಂಧ ಉತ್ತಮವಾಗಿದೆ. ವಿಶೇಷವಾಗಿ, ಜಪಾನ್ ಗೆ ಸಂಬಂಧಿಸಿದಂತೆ,  ತುಮಕೂರಿನ ವಸಂತನರಸಪುರದಲ್ಲಿ ಜಪಾನೀಸ್ ಕೈಗಾರಿಕಾ ಟೌನ್ ಶಿಪ್ ಸ್ಥಾಪಿಸಲಾಗಿದೆ. ಇದಲ್ಲದೇ ಜಪಾನಿ ಕಂಪನಿಗಳ ಸಹಯೋಗದೊಂದಿಗೆ ಅನೇಕ ಅಭಿವೃದ್ಧಿ ಯೋಜನೆಗಳನ್ನು ಕಾರ್ಯಗತಗೊಳಿಸಲಾಗಿದೆ. ಜಪಾನಿ ಕೈಗಾರಿಕಾ ಟೌನ್ ಶಿಪ್ ಗೆ 519.55 ಎಕರೆ ಭೂಮಿ ಮೀಸಲಿಡಲಾಗಿದ್ದು, ರಸ್ತೆ, ವಿದ್ಯುತ್ ಮತ್ತು ನೀರು ಸರಬರಾಜಿನಂತಹ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಈ ಟೌನ್ ಶಿಪ್ ನಲ್ಲಿ  ಹೆವಿ ಎಂಜಿನಿಯರಿಂಗ್, ಯಂತ್ರೋಪಕರಣ, ಆಟೋಮೋಟಿವ್ ಮತ್ತು ಏರೋಸ್ಪೇಸ್ ಘಟಕಗಳಿಗೆ ಆದ್ಯತೆ ನೀಡಲಾಗಿದೆ, ಎಂದು ಹೇಳಿದರು.

ವಿದೇಶಿ ನೇರ ಹೂಡಿಕೆಯಲ್ಲಿ ಮುಂಚೂಣಿ: ಐಟಿ/ಐಟಿಇಎಸ್, ಯಂತ್ರೋಪಕರಣಗಳು, ವಾಹನಗಳು, ಏರೋಸ್ಪೇಸ್ ಸೇರಿದಂತೆ ರಾಜ್ಯದಲ್ಲಿ ಲಭ್ಯವಿರುವ ಪ್ರಾಥಮಿಕ ಮತ್ತು ತೃತೀಯ ವಲಯದ  ಉದ್ದಿಮೆ ಅವಕಾಶಗಳ ಬಗ್ಗೆ ವಿವರಿಸಿದ  ಮುಖ್ಯಮಂತ್ರಿ ಯಡಿಯೂರಪ್ಪ, ದೇಶದ ಹೂಡಿಕೆದಾರರು ಕರ್ನಾಟಕಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದರೆ, ಇತ್ತೀಚೆಗೆ ವಿದೇಶಿ ಉದ್ಯಮಿಗಳೂ ರಾಜ್ಯದ ಬಗ್ಗೆ ಒಲವು ತೋರಿಸುತ್ತಿದ್ದಾರೆ. 2020ರ ಮಾರ್ಚ್ ಗೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ವಿದೇಶಿ ನೇರ ಹೂಡಿಕೆಯಲ್ಲಿ ನಾವು ಎರಡನೇ ಸ್ಥಾನದಲ್ಲಿದ್ದೇವೆ ಎಂದರು.

ಹೆಚ್ಚಿನ ಸಂಖ್ಯೆಯ ಸ್ಟಾರ್ಟ್ ಅಪ್ ಗಳಿಗೆ ರಾಜ್ಯ ನೆಲೆಯಾಗಿದ್ದು, ಉದಯೋನ್ಮುಖ ಉದ್ಯಮಿಗಳಿಗೆ ಪೂರಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವಲ್ಲಿ ಅತ್ಯುತ್ತಮ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಲವು ಕ್ಷೇತ್ರಗಳಲ್ಲಿ ಗಮನಾರ್ಹ ಬೆಳವಣಿಗೆ ಸಾಧಿಸಿರುವ ಕರ್ನಾಟಕ, ಉದ್ಯಮ ಸ್ನೇಹಿ ಆಡಳಿತದ ಜತೆಗೆ ಕೈಗಾರಿಕೆಗಳಿಗೆ ಪೂರಕವಾದ ನೀತಿ ರೂಪಿಸುವ ಮೂಲಕ ಉತ್ತಮ ವ್ಯವಸ್ಥೆ ನಿರ್ಮಿಸಿದೆ ಎಂದು ಯಡಿಯೂರಪ್ಪ ಹೇಳಿದರು.

ರಾಜ್ಯದ ಆರ್ಥಿಕ ಪ್ರಗತಿ ದರ ಶೇ. 9.6: ದೇಶದ ಆಕರ್ಷಕ ಹೂಡಿಕೆ ತಾಣವಾಗಿರುವ ಕರ್ನಾಟಕ,  ಕೈಗಾರಿಕೆಯಲ್ಲಿ ಮುಂದುವರಿದ ರಾಜ್ಯಗಳಲ್ಲಿ ಒಂದು.  ಸುಮಾರು  ಸುಮಾರು 250 ಶತಕೋಟಿ ಡಾಲರ್ ಆರ್ಥಿಕತೆಯ ರಾಜ್ಯ, ಶೇ.9.6ರಷ್ಟು ದರದಲ್ಲಿ ಪ್ರಗತಿ ಕಾಣುತ್ತಿದೆ. ಹಲವಾರು ಕ್ಷೇತ್ರಗಳಲ್ಲಿ ಮುಂಚೂಣಿ ಸಾಧಿಸಿದೆ. ಯಂತ್ರೋಪಕರಣಗಳು, ಬೃಹತ್ ಯಂತ್ರೋಪಕರಣಗಳು, ವಾಹನಗಳು, ಎಲೆಕ್ಟ್ರಾನಿಕ್ಸ್, ಏರೋಸ್ಪೇಸ್ ಮತ್ತು ಡಿಫೆನ್ಸ್ ಜೈವಿಕ ತಂತ್ರಜ್ಞಾನದಂತಹ ವ್ಯಾಪಕ ಶ್ರೇಣಿಯ ಕೈಗಾರಿಕೆಗಳಲ್ಲಿ ರಾಜ್ಯ ಬಹಳ ಹಿಂದಿನಿಂದಲೂ ಪ್ರಾಬಲ್ಯ ಹೊಂದಿದೆ. ಫಾರ್ಚೂನ್  500  ಕಂಪನಿಗಳ ಪೈಕಿ  400 ಕಂಪನಿಗಳು, ಸುಮಾರು 400 ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರಗಳಿಗೆ (ದೇಶದ ಒಟ್ಟು ಸಂಸ್ಥೆಗಳ ಪೈಕಿ ಶೇ. 44) ಬೆಂಗಳೂರು ನೆಲೆಯಾಗಿದೆ ಎಂದು ತಿಳಿಸಿದರು.

ಶಾಲೆಗಳು, ಮನರಂಜನೆ, ಮೆಟ್ರೋ ರೈಲು, ಅಂತಾರಾಷ್ಟ್ರೀಯ ವಿಮಾನಯಾನ ಮತ್ತು ಸಾಮಾಜಿಕ ಕೂಟಗಳನ್ನು ಹೊರತುಪಡಿಸಿ ಉಳಿದೆಲ್ಲ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಆರ್ಥಿಕ ಚಟುವಟಿಕೆಗಳನ್ನು ಬೆಂಬಲಿಸುವ ಮೂಲಕ ಆರ್ಥಿಕ ಪುನಶ್ಚೇತನಗೊಳಿಸಲು ರಾಜ್ಯ ಹಲವಾರು ಕ್ರಮಗಳನ್ನ ಕೈಗೊಂಡಿದೆ. ನೀತಿ ಆಯೋಗ ಬಿಡುಗಡೆ ಮಾಡುವ ಹೊಸ ಆವಿಷ್ಕಾರಗಳ ಸೂಚಿ 2019ರ ಪಟ್ಟಿಯಲ್ಲಿ ನಮ್ಮ ರಾಜ್ಯ ಅಗ್ರ ಸ್ಥಾನ ಪಡೆದಿದೆ. ನುರಿತ ಮಾನವ ಸಂಪನ್ಮೂಲ ಲಭ್ಯತೆ, ಹೆಸರಾಂತ ಉನ್ನತ ಶಿಕ್ಷಣ ಸಂಸ್ಥೆಗಳು, ಪ್ರಮುಖ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳು, ಉತ್ತಮ ಆಡಳಿತ ಹಾಗೂ ಹೂಡಿಕೆಗೆ ಪೂರಕ ವಾತಾವರಣದಿಂದಾಗಿ ರಾಜ್ಯ ಅಗ್ರ ಸ್ಥಾನ ಪಡೆಯಲು ಸಾಧ್ಯವಾಗಿದೆ ಎಂದು ವಿವರಿಸಿದರು.

ಹೊಸ ನೀತಿಗಳಿಂದ ಕೈಗಾರಿಕಾ ಸ್ನೇಹಿ ವಾತಾವರಣ: ಹೂಡಿಕೆದಾರರ ಹಿತವನ್ನು ಗಮನದಲ್ಲಿಟ್ಟುಕೊಂಡು ನಮ್ಮ ಸರ್ಕಾರ ಪರಿಚಯಿಸಿರುವ ಹೊಸ ಕೈಗಾರಿಕಾ ನೀತಿ 2020-2025,  ಬೃಹತ್ ಪ್ರಮಾಣದಲ್ಲಿ ಉದ್ಯೋಗಾವಕಾಶಗಳ ಸೃಷ್ಟಿಸಲು ನೆರವಾಗಲಿದೆ. ಮುಂಗಾಣ್ಕೆಯ ಈ ಕೈಗಾರಿಕಾ ನೀತಿಯು ಉದ್ದಿಮೆಗೆ ಪೂರಕವಾದ ಭತ್ಯೆ ಸೇರಿದಂತೆ ಭೂ ಲಭ್ಯತೆ, ಕಾರ್ಮಿಕ ಕಾನೂನಿನ ಸುಧಾರಣೆ ಹಲವು ನಿಯಂತ್ರಕ ಸುಧಾರಣೆಗಳನ್ನು ತಂದಿದೆ. ಆರ್ಥಿಕ ಮತ್ತು ಕೈಗಾರಿಕಾ ಅಭಿವೃದ್ಧಿಯನ್ನು ಉತ್ತೇಜಿಸುವುದು ನಮ್ಮ ಸರ್ಕಾರದ ಮೊದಲ ಆದ್ಯತೆ ಎಂದು ಅವರು ಹೇಳಿದರು.
ನಾನಾ ಕ್ಷೇತ್ರಗಳ ಹೂಡಿಕೆದಾರರಿಗೆ ಅನುಕೂಲ ಮಾಡಿಕೊಡಲು ಬದ್ಧವಾಗಿರುವ  ರಾಜ್ಯ ಸರ್ಕಾರ ಸುಲಲಿತ ವ್ಯವಹಾರಕ್ಕೆ ಒತ್ತು ನೀಡುತ್ತದೆ. ಕೈಗಾರಿಕಾ ಸೌಲಭ್ಯ ಕಾಯ್ದೆ (2002)ಕ್ಕೆ ತಿದ್ದುಪಡಿ ತರುವ ಮೂಲಕ  ಕೈಗಾರಿಕಾ ಸ್ಥಾಪನೆಗಾಗಿ ಕೈಗಾರಿಕೋದ್ಯಮಿಗಳು ವಿವಿಧ ಇಲಾಖೆಗಳಿಗೆ ಅಲೆದಾಡಬೇಕಾದ ಪ್ರಮೇಯವಿಲ್ಲ. ಬದಲಿಗೆ ಜಿಲ್ಲಾ ಸಮಿತಿ ಹಾಗೂ ರಾಜ್ಯ ಸಮಿತಿಗಳಿಂದ ಕೈಗಾರಿಕಾ ಸ್ಥಾಪನೆಗೆ ಅನುಮತಿ ಸಿಕ್ಕ ಕೂಡಲೇ ಕಾಮಗಾರಿ ಆರಂಭ ಮಾಡಿ,  ಮೂರು ವರ್ಷಗಳ ಕಾಲಾವಕಾಶದಲ್ಲಿ ಇತರ ಎಲ್ಲಾ ಅನುಮತಿಗಳನ್ನು ಪಡೆದುಕೊಳ್ಳಲು ಈ ತಿದ್ದುಪಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದರು.

ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ ಮಾತನಾಡಿ, ರಾಜ್ಯದ ಆರ್ಥಿಕ ಪ್ರಗತಿ ಮತ್ತು ಕೈಗಾರಿಕೆಗಳ ಅಭಿವೃದ್ಧಿ ನಮ್ಮ ಸರ್ಕಾರದ ಪ್ರಮುಖ ಆದ್ಯತೆ. ಏರೋಸ್ಪೇಸ್, ಎಲೆಕ್ಟ್ರಿಕ್ ವೆಹಿಕಲ್ಸ್, ಎಲೆಕ್ಟ್ರಾನಿಕ್ಸ್, ಜವಳಿ, ಕೃಷಿ, ಐಟಿ ಮತ್ತು ಜೈವಿಕ ತಂತ್ರಜ್ಞಾನದಂತಹ ಕ್ಷೇತ್ರಗಳನ್ನು ಉತ್ತೇಜಿಸಲು ನಿರ್ದಿಷ್ಟ ನೀತಿ ರೂಪಿಸಲಾಗಿದೆ. ಹೂಡಿಕೆಗೆ  ಸೂಕ್ತ ತಾಣವಾಗಿರುವ ಕರ್ನಾಟಕಕ್ಕೆ ಜಪಾನಿನ ಕಂಪನಿಗಳನ್ನು ಆಹ್ವಾನಿಸುತ್ತೇವೆ. ಈ ನಿಟ್ಟಿನಲ್ಲಿ ಎಲ್ಲ ಸೌಲಭ್ಯ ಒದಗಿಸಲು ನಾವು ಬದ್ಧ. ಕರ್ನಾಟಕ ಮತ್ತು ಜಪಾನ್ ಪರಸ್ಪರ ಲಾಭದಾಯಕ ಆರ್ಥಿಕ ಸಹಭಾಗಿತ್ವವನ್ನು ಹೊಂದುವ ವಿಶ್ವಾಸ ನನಗಿದೆ ಎಂದು ಹೇಳಿದರು.

ವೀಡಿಯೋ ಕಾನ್ಫರೆನ್ಸ್ ನಲ್ಲಿ ಜಪಾನ್ ನಲ್ಲಿರುವ ಭಾರತದ ರಾಯಭಾರಿ ಹೆಚ್ ಇ. ಸಂಜಯ್ ಕುಮಾರ್ ವರ್ಮಾ, ಜಪಾನ್ ರಾಯಭಾರಿ ಎಚ್.ಇ. ಸತೋಶಿ ಸುಜುಕಿ,  ಐಸಿಸಿ ಅಧ್ಯಕ್ಷ ಮಯಾಂಕ್ ಜಲನ್ ಐಸಿಸಿಯ ಕಾರ್ಯಕಾರಿ ಸಮಿತಿ ಸದಸ್ಯ ಹೇಮಂತ್ ಕನೊರಿಯಾ, ಜೆತ್ರೊ ಹೊದ ಉಪಾಧ್ಯಕ್ಷ ಕಜುಯ ನಕಜೊ, ಒಡಿಶಾದ ಕೈಗಾರಿಕಾ ಸಚಿವ ದಿಬ್ಯ ಶಂಕರ್ ಮಿಶ್ರಾ,  ನೀತಿ ಆಯೋಗದ ಸಿಇಓ ಅಮಿತಾಬ್ ಕಾಂತ್, ಐಸಿಸಿ ಡಬ್ಲ್ಯು ಆರ್ ಸಮಿತಿಯ ಅಧ್ಯಕ್ಷ ಅಮೇಯ ಪ್ರಭು, ತಮಿಳುನಾಡಿನ ಕೈಗಾರಿಕಾ ಮಾರ್ಗದರ್ಶನ ಮತ್ತು ರಫ್ತು ಪ್ರಚಾರ ಬ್ಯೂರೋದ ವ್ಯವಸ್ಥಾಪಕ ನಿರ್ದಶಕ ಡಾ. ನೀರಜ್ ಮಿತ್ತಲ್ ಒಡಿಶಾದ ಕೈಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹೇಮಂತ್ ಶರ್ಮ,  ಮಹಾರಾಷ್ಟ್ರದ ಕೈಗಾರಿಕಾ ಅಭಿವೃದ್ಧಿ ನಿಗಮದ ಸಿಇಓ ಡಾ. ಪಿ. ಅನ್ಬಳಗನ್ ಹಾಗೂ ಜಪಾನಿನ ಪ್ರತಿನಿಧಿಗಳು ಭಾಗವಹಿಸಿದ್ದರು.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×