ನವದೆಹಲಿ: ಮಹಾ ಮಾರಿ ಕೊರೋನಾ ವೈರಸ್ ಹರಡುವುದನ್ನು ನಿಯಂತ್ರಿಸಲು ವಿನ್ಯಾಸಗೊಳಿಸಲಾದ ‘ಆರೋಗ್ಯ ಸೇತು’ ಆ್ಯಪ್ ಸೃಷ್ಟಿಸಿದ್ದು ಯಾರು ಎಂಬುದರ ಬಗ್ಗೆ ಕೇಂದ್ರ ಸರ್ಕಾರಕ್ಕೇ ಮಾಹಿತಿ ಇಲ್ಲ.
ಹೌದು, ಅಚ್ಚರಿ ಎನಿಸಿದರೂ ಇದು ಸತ್ಯ. ಆರೋಗ್ಯ ಸೇತು ಆ್ಯಪ್ ಅಭಿವೃದ್ಧಿಪಡಿಸಿದವರು ಯಾರು ಎಂಬ ಆರ್ ಟಿಐ ಪ್ರಶ್ನೆಗೆ ಹಾರಿಕೆ ಉತ್ತರ ನೀಡಿದ ಕೇಂದ್ರ ಸರ್ಕಾರಕ್ಕೆ ಕೇಂದ್ರ ಮಾಹಿತಿ ಆಯೋಗ ನೋಟಿಸ್ ನೀಡಿದೆ. ಅಲ್ಲದೆ ಅಧಿಕಾರಿಗಳು ಮಾಹಿತಿಯನ್ನು ನಿರಾಕರಿಸುವುದನ್ನು ಒಪ್ಪಲಾಗದು ಎಂದು ಆಯೋಗ ಖಾರವಾಗಿ ಹೇಳಿದೆ.
ಆರೋಗ್ಯ ಸೇತು ವೆಬ್‌ಸೈಟ್‌ನಲ್ಲಿ, ಸಚಿವಾಲಯಗಳ ವೆಬ್‌ಸೈಟ್‌ಗಳನ್ನು ಅಭಿವೃದ್ಧಿಪಡಿಸುವ ‘ನ್ಯಾಷನಲ್ ಇನ್ಫಾರ್ಮೆಟಿಕ್ಸ್ ಸೆಂಟರ್’(ಎನ್‌ಐಸಿ) ಆ್ಯಪ್ ಅನ್ನು ಅಭಿವೃದ್ಧಿಪಡಿಸಿದೆ ಎಂದು ಉಲ್ಲೇಖಿಸಲಾಗಿದೆ. ಆದರೆ ಈ ಕುರಿತು ಮಾಹಿತಿ ಹಕ್ಕು ಮುಖಾಂತರ ಕೇಳಿದರೆ, ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಹಾಗೂ ಎನ್‌ಐಸಿ, ಎರಡೂ ಆ್ಯಪ್ ಅಭಿವೃದ್ಧಿಪಡಿಸಿದವರು ಯಾರು ಎಂದು ತಿಳಿದಿಲ್ಲ ಎಂದು ಪ್ರತಿಕ್ರಿಯೆ ನೀಡಿವೆ.
ಈ ಸಂಬಂಧ ಕೇಂದ್ರ ಮಾಹಿತಿ ಆಯೋಗವು, ಎಲೆಕ್ಟ್ರಾನಿಕ್ಸ್ ಸಚಿವಾಲಯ, ರಾಷ್ಟ್ರೀಯ ಮಾಹಿತಿ ಕೇಂದ್ರ ಮತ್ತು ರಾಷ್ಟ್ರೀಯ ಇ-ಆಡಳಿತ ವಿಭಾಗ(ಎನ್‌ಜಿಡಿ)ಕ್ಕೆ ಶೋ-ಕಾಸ್ ನೋಟಿಸ್ ನೀಡಿದೆ.
“ಆ್ಯಪ್ ಅನ್ನು ಯಾರು ರೂಪಿಸಿದ್ದಾರೆ, ಕಡತಗಳು ಎಲ್ಲಿವೆ ಎಂಬುದನ್ನು ವಿವರಿಸಲು ಮುಖ್ಯ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ. ಇದು ಹಾಸ್ಯಾಸ್ಪದ,” ಎಂದಿರುವ ಆಯೋಗ, ನವೆಂಬರ್ 24 ರಂದು ತನ್ನ ಮುಂದೆ ಹಾಜರಾಗುವಂತೆ ಸಂಬಂಧಿಸಿದ ಇಲಾಖೆಗಳಿಗೆ ಸೂಚಿಸಿದೆ.
Follow us on Social media