ನವದೆಹಲಿ: ಆತ್ಮನಿರ್ಭರ ಭಾರತ ಪರಿಕಲ್ಪನೆ ಪ್ರತೀ ಭಾರತೀಯರ ಮನಸ್ಸಿನಲ್ಲಿದ್ದು, ಈ ಕನಸು ಪ್ರತಿಜ್ಞೆಯಾಗಿ ಬದಲಾಗುತ್ತಿದೆ. ಇಂದು 130 ಕೋಟಿ ಭಾರತೀಯರ ಮನಸ್ಸಿನಲ್ಲಿ ಆತ್ಮನಿರ್ಭರ್ ಭಾರತ ಜನತೆಯ ದಿವ್ಯ ಮಂತ್ರವಾಗಿ ಮಾರ್ಪಟ್ಟಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಹೇಳಿದ್ದಾರೆ.
ಐತಿಹಾಸಿಕ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ ಅವರು, ಇಂದು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ-ಬಲಿದಾನವನ್ನು ನೆನೆಯುವ ದಿನ. ನಮ್ಮ ರಕ್ಷಣೆಗಾಗಿ ಗಡಿಯಲ್ಲಿ ನಿಂತಿರುವ ಸೈನಿಕರು ಹಾಗೂ ರಾಷ್ಟ್ರಕ್ಕೆ ಸೇವೆ ಸಲ್ಲಿಸುತ್ತಿರುವ ಪೊಲೀಸರು ಸೇರಿಂದತೆ ಭದ್ರತಾ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸುವ ದಿನ ಇದಾಗಿದೆ. ಈ ದಿನವನ್ನು ಅವರಿಗೆ ಸಮರ್ಪಿಸಬೇಕು ಎಂದು ಹೇಳಿದರು.
ಆತ್ಮ ನಿರ್ಭರ ಭಾರತ ಒಂದು ಕನಸು ಸಂಕಲ್ಪವಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ, 130 ಕೋಟಿ ಜನರಿಗೆ ಆತ್ಮನಿರ್ಭರ ಭಾರತ ದಿವ್ಯ ಮಂತ್ರವಾಗಿ ಮಾರ್ಪಟ್ಟಿದೆ. ಕೃಷಿ ಕ್ಷೇತ್ರದಲ್ಲಿ ನಾವು ‘ಆತ್ಮ ನಿರ್ಭರ’ರಾಗುತ್ತಿದ್ದೇವೆ. ಕೃಷಿ ಕ್ಷೇತ್ರಗಳಿಗೆ ಸಂಬಂಧಿಸಿದ ಕಾನೂನುಗಳನ್ನು ಸರಳಗೊಳಿಸಲಾಗಿದೆ. ‘ಆತ್ಮ ನಿರ್ಭರ ಭಾರತ’ ಕನಸನ್ನು ಭಾರತ ಸಾಕಾರಗೊಳಿಸುತ್ತದೆ. ಭಾರತೀಯರ ಸಾಮರ್ಥ್ಯ ಸಾಮರ್ಥ್ಯದ ಬಗ್ಗೆ ನನಗೆ ವಿಶ್ವಾಸವಿದೆ. ಒಮ್ಮೆ ನಾವು ಏನನ್ನಾದರೂ ಮಾಡಲು ನಿರ್ಧರಿಸಿದರೆ, ನಾವು ಆ ಗುರಿಯನ್ನು ಸಾಧಿಸುವವರೆಗೆ ನಾವು ವಿಶ್ರಾಂತಿ ಪಡೆಯುವುದಿಲ್ಲ.
ವಿಶ್ವ ಕಲ್ಯಾಣದಲ್ಲಿ ಭಾರತದ ಕರ್ತವ್ಯವಿದೆ. ಭಾರತ ಸಶಕ್ತವಾಗಬೇಕಿದೆ, ಆತ್ಮ ನಿರ್ಭರವಾಗಬೇಕಿದೆ. ನಮಗೆ ನಮ್ಮ ಖುದ್ದಾದ ಸಾಮರ್ಥ್ಯವಿದ್ದರೆ ಇಡೀ ವಿಶ್ವದ ಅಭಿವೃದ್ಧಿಯಾಗಲಿದೆ. ಮಾನವ ಸಂಪದದಲ್ಲಿ ಮೌಲ್ಯವೃದ್ಧಿ ಮಾಡೋಣ. ಕಚ್ಚಾ ವಸ್ತುಗಳನ್ನು ವಿದೇಶಕ್ಕೆ ಕಳುಹಿಸುವುದು, ರೆಡಿ ವಸ್ತುಗಳನ್ನು ಆಮದು ಮಾಡಿಕೊಳ್ಳುವುದು ಎಷ್ಟು ದಿನ ನಡೆಯುತ್ತದೆ. ಆತ್ಮ ನಿರ್ಭರವಾಗಲೇಬೇಕು.
ಕೃಷಿ ಕ್ಷೇತ್ರದಲ್ಲಿ ಆತ್ಮ ನಿರ್ಭರ ಮಾಡಿದ್ದಾರೆ, ಬೇರೆ ದೇಶಗಳಿಗೂ ಊಟ ನೀಡಲು ನಮ್ಮ ರೈತರು ತಯಾರಿದ್ದಾರೆ. ಕೃಷಿ ಜಗತ್ತನ್ನು ಮುನ್ನುಗ್ಗಿಸುವ ಅವಶ್ಯಕತೆ ಇದೆ. ಕೃಷಿ ಕ್ಷೇತ್ರವನ್ನು ಕಾನೂನಿನಿಂದ ಮುಕ್ತಗೊಳಿಸಿದ್ದೇವೆ. ಕೇವಲ ಆಮದು ಕಡಿಮೆ ಮಾಡುವುದು ಮಾತ್ರ ಆತ್ಮ ನಿರ್ಭರವಲ್ಲ, ನಮ್ಮ ದೇಶೀಯ ವಸ್ತುಗಳನ್ನು ಮಾರ್ಕೆಟಿಂಗ್ ಮಾಡುವುದು, ಕೌಶಲ್ಯವನ್ನು ಹೆಚ್ಚಿಸುವುದು ಕೂಡ ಪ್ರಮುಖವಾಗಿದೆ. ಕೊರೊನಾ ಸಂಕಷ್ಟದ ಸಮಯದಲ್ಲಿ ಕೆಲವು ವಸ್ತುಗಳ ಅವಶ್ಯಕತೆ ಇತ್ತು, ವಿಶ್ವದಿಂದ ತರಿಸಿಕೊಳ್ಳುವ ಅಗತ್ಯವಿತ್ತು. ಆದರೆ ಸಿಗುತ್ತಿರಲಿಲ್ಲ. ಆದರೆ ಉದ್ಯಮಿಗಳು ಮನಸ್ಸು ಮಾಡಿ ಎನ್ 95 ಮಾಸ್ಕ್ ತಯಾರಿಕೆಯಿಂದ ಹಿಡಿದು ಸಾಕಷ್ಟು ಕೆಲಸವನ್ನು ಮಾಡಿವೆ. ಬೇರೆ ದೇಶಗಳಿಗೆ ರಫ್ತನ್ನು ಕೂಡ ಮಾಡಿದ್ದೇವೆ. ವೋಕಲ್ ಫಾರ್ ಲೋಕಲ್ ಎನ್ನುವುದು ದೇಶದ ಮಂತ್ರವಾಗಿರಬೇಕು ಎಂದು ಹೇಳಿದ್ದಾರೆ.
Follow us on Social media