ನಟ ಆರ್ಯನ್ ಸಂತೋಷ್ ಅಭಿನದ ಡಿರ್ ಸತ್ಯ ಸಿನಿಮಾ ಟೀಸರ್ ಅನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ರಿಲೀಸ್ ಮಾಡಲಿದ್ದಾರೆ. ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಇದರ ಮೊದಲ ಟೀಸರ್ ರಿಲೀಸ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ.
ಚಿತ್ರಮಂದಿರದಲ್ಲಿ ರಿಲೀಸ್ ಮಾಡದೆ, ನೇರವಾಗಿ ಓಟಿಟಿಯಲ್ಲಿ ಆದರ್ಶ್ ಈಶ್ವರಪ್ಪ ನಿರ್ದೇಶನದ ‘ಭಿನ್ನ’ ಚಿತ್ರವನ್ನು ರಿಲೀಸ್ ಮಾಡಲಾಗಿತ್ತು. ಇದೀಗ ಆ ಸಿನಿಮಾದ ನಂತರ ಪರ್ಪಲ್ ರಾಕ್ ಎಂಟರ್‌ಟೈನರ್ಸ್ ಮತ್ತು ವಿಂಟರ್ ಬ್ರಿಡ್ಜ್ ಸ್ಟುಡಿಯೋಸ್ ಸಂಸ್ಥೆಯು ‘ಡಿಯರ್ ಸತ್ಯ’ ಎನ್ನುವ ಮತ್ತೊಂದು ಥ್ರಿಲ್ಲರ್ ಸಿನಿಮಾವನ್ನು ನಿರ್ಮಿಸಿದೆ.
‘ಪ್ಯಾಟೇ ಹುಡ್ಗೀರ್ ಹಳ್ಳಿ ಲೈಫು’, ‘ಹಳ್ಳಿ ಹೈದ ಪ್ಯಾಟೇಗ್ ಬಂದ’ ರಿಯಾಲಿಟಿ ಶೋಗಳಿಗೆ ನಿರೂಪಕರಾಗಿ, ‘ಬಿಗ್ ಬಾಸ್ ಸೀಸನ್ 2’ರಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಆರ್ಯನ್ ಸಂತೋಷ್, ‘ನೂರು ಜನ್ಮಕು’ ಚಿತ್ರದ ಮೂಲಕ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯಗೊಂಡಿದ್ದರು. ಇದೀಗ ಅವರು ‘ಡಿಯರ್ ಸತ್ಯ’ನಾಗಿ ರೀ-ಎಂಟ್ರಿ ನೀಡುತ್ತಿದ್ದಾರೆ.
ಅವರಿಗೆ ನಾಯಕಿಯಾಗಿ ಅರ್ಚನಾ ಕೊಟ್ಟಿಗೆ ನಟಿಸುತ್ತಿದ್ದಾರೆ. ನೈಜ ಘಟನೆಗಳಿಂದ ಪ್ರೇರಣೆಗೊಂಡಿರುವ ‘ಡಿಯರ್ ಸತ್ಯ’ ಚಿತ್ರದಲ್ಲಿ ಅರುಣಾ ಬಾಲರಾಜ್, ಅಶ್ವಿನ್ ರಾವ್ ಪಲ್ಲಕ್ಕಿ, ಅರವಿಂದ್ ರಾವ್, ಅಪ್ಪಣ್ಣ, ಗುರುರಾಜ ಹೊಸಕೋಟೆ, ಆದರ್ಶ್ ಚಂದ್ರಕರ್ ಮುಂತಾದವರು ನಟಿಸಿದ್ದಾರೆ. ಚಿತ್ರ ತಂಡ ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ.
Follow us on Social media