ನವದೆಹಲಿ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಎಸ್‌ಪಿಜಿ ಭದ್ರತೆಯನ್ನು ಹಿಂಪಡೆಯಲಾಗಿದೆ. ಹೀಗಾಗಿ ಲೋಧಿ ಎಸ್ಟೇಟ್‌ನಲ್ಲಿ ಸರ್ಕಾರದಿಂದ ನೀಡಲಾಗಿರುವ ಮನೆಯನ್ನು ಒಂದು ತಿಂಗಳೊಳಗೆ ಖಾಲಿ ಮಾಡುವಂತೆ ಕೇಂದ್ರ ಸರ್ಕಾರ ಆದೇಶಿಸಿದೆ.
ಎಸ್‌ಪಿಜಿ ಭದ್ರತೆ ಮುಂದುವರಿಯದ ಕಾರಣ, ಪ್ರಿಯಾಂಕ ಗಾಂಧಿ ವಾದ್ರಾ ಅವರಿಗೆ ಸರಕಾರದಿಂದ ನೀಡಲಾಗಿರುವ ಬಂಗಲೆಯನ್ನು ಆಗಸ್ಟ್ 1ರೊಳಗೆ ಖಾಲಿ ಮಾಡಬೇಕು. ಇಲ್ಲದಿದ್ದರೆ, ಆಗಸ್ಟ್ 1ರ ನಂತರ ಎಷ್ಟು ದಿನ ಆ ಬಂಗಲೆಯಲ್ಲೇ ತಂಗಿರುತ್ತಾರೋ, ಅಷ್ಟೂ ದಿನಗಳಿಗೆ ಹಾನಿ ಶುಲ್ಕ ಹಾಗೂ ದಂಡದ ರೂಪದಲ್ಲಿ ಬಾಡಿಗೆ ಪಾವತಿ ಮಾಡಬೇಕು ಎಂದು ಕೇಂದ್ರ ಸರಕಾರ ತನ್ನ ಆದೇಶದಲ್ಲಿ ತಿಳಿಸಿದೆ.
ಪ್ರಿಯಾಂಕಾ ಗಾಂಧಿ ಅವರಿಗೆ ನೀಡಲಾಗಿದ್ದ ಎಸ್‌ಪಿಜಿ ಹಂತದ ಭದ್ರತೆಯನ್ನ ಕಳೆದ ವರ್ಷ ಸರ್ಕಾರ ಹಿಂಪಡೆದುಕೊಂಡು ಝಡ್+ ಸೆಕ್ಯೂರಿಟಿ ನೀಡಿತ್ತು. ಎಸ್‌ಪಿಜಿ ಭದ್ರತೆ ಹೊಂದಿದವರಿಗೆ ಸರ್ಕಾರಿ ಬಂಗಲೆಯಲ್ಲಿ ವಾಸವಿರಲು ಅವಕಾಶ ಕೊಡಲಾಗುತ್ತದೆ. ಅಂದರಂತೆ 1997ರಲ್ಲಿ ಹೊಸ ದಿಲ್ಲಿಯ ಲುಟ್ಯೆನ್ಸ್ ಪ್ರದೇಶದಲ್ಲಿರುವ ಲೋಧಿ ಎಸ್ಟೇಟ್ನ 35ನೇ ನಂಬರ್ನ ಬಂಗಲೆಯನ್ನ ಪ್ರಿಯಾಂಕಾ ಗಾಂಧಿಗೆ ಒದಗಿಸಲಾಗಿತ್ತು. ಆದರೆ, ಎಸ್‌ಪಿಜಿ ಭದ್ರತೆ ವಾಪಸ್ ಪಡೆದ ಹಿನ್ನೆಲೆಯಲ್ಲಿ ಸರ್ಕಾರಿ ಬಂಗಲೆ ಸೌಕರ್ಯವನ್ನೂ ಹಿಂಪಡೆದುಕೊಳ್ಳಲಾಗಿದೆ.
ಝಡ್ ಪ್ಲಸ್ ಸೆಕ್ಯೂರಿಟಿ ಹೊಂದಿದವರಿಗೆ ಸರ್ಕಾರಿ ಬಂಗಲೆ ಕೊಡುವ ಅವಕಾಶ ಇರುವುದಿಲ್ಲ. ಕ್ಯಾಬಿನೆಟ್ ವಸತಿ ಸಮಿತಿ(ಸಿಸಿಎ) ವಿಶೇಷ ವಿನಾಯಿತಿ ನೀಡಲು ಅಂಗೀಕರಿಸಿದರೆ ಮಾತ್ರ ಝಡ್+ ಭದ್ರತೆ ಹೊಂದಿದವರಿಗೆ ಸರ್ಕಾರಿ ಬಂಗಲೆಯ ಸೌಲಭ್ಯ ಇರುತ್ತದೆ. ಆದರೆ, ಇಲ್ಲಿ ಪ್ರಿಯಾಂಕಾ ಗಾಂಧಿ ಅವರಿಗೆ ಅಂಥ ಯಾವುದೇ ವಿನಾಯಿತಿ ಸಿಕ್ಕಿಲ್ಲ.
ತಿದ್ದುಪಡಿ ಕಾಯಿದೆಯಂತೆ ಪ್ರಧಾನಿಯವರ ಎಸ್‌ಪಿಜಿ ಭದ್ರತೆಯಲ್ಲಿಯಾವುದೇ ಬದಲಾವಣೆ ಇರುವುದಿಲ್ಲ. ಮಾಜಿ ಪ್ರಧಾನಿಗಳಿಗೂ ಭದ್ರತಾ ನಿಯಮ ಯಥಾಸ್ಥಿತಿಯಲ್ಲಿರಲಿದೆ. ಆದರೆ ಅವರ ಕುಟುಂಬ ಸದಸ್ಯರಿಗೆ ಮಾಜಿಯಾದ ನಂತರದ ಐದು ವರ್ಷಗಳ ಅವಧಿವರೆಗೆ ಮಾತ್ರ ಎಸ್‌ಪಿಜಿ ಭದ್ರತೆ ದೊರೆಯುತ್ತದೆ.
Follow us on Social media