ಆಂಧ್ರಪ್ರದೇಶ : ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಕಾರಣದಿಂದಾಗಿ ಈಗಾಗಲೇ ತಮಿಳುನಾಡು ಹಾಗೂ ತೆಲಂಗಾಣದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ರದ್ದು ಮಾಡಲಾಗಿದ್ದು ಈಗ ಆಂಧ್ರಪ್ರದೇಶದಲ್ಲಿಯೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ರದ್ದು ಮಾಡಲಾಗಿದೆ.
ಈ ಕುರಿತಾಗಿ ಮಾಹಿತಿ ನೀಡಿರುವ ಆಂಧ್ರಪ್ರದೇಶದ ಶಿಕ್ಷಣ ಸಚಿವ ಆದಿಮುಲಾಪು ಸುರೇಶ್, ದೇಶದಲ್ಲಾಗಲಿ ರಾಜ್ಯದಲ್ಲಾಗಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದಿಲ್ಲ. ವಿದ್ಯಾರ್ಥಿಗಳ ಆರೋಗ್ಯ ಮುಖ್ಯ. ಈ ನಿಟ್ಟಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ರದ್ದುಗೊಳಿಸಲಾಗಿದೆ. ಹಾಗೆಯೇ ಎಲ್ಲಾ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಜೂನ್ 25 ರಿಂದ ಜುಲೈ 4 ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿದ್ದು ಈಗಾಗಲೇ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹಾಗೆಯೇ ಕಂಟೈನ್‌ಮೆಂಟ್ ಪ್ರದೇಶದ ವಿದ್ಯಾರ್ಥಿಗಳು ಹಾಗೂ ಮನೆಯಲ್ಲಿ ಕ್ವಾರಂಟೈನ್‌ನಲ್ಲಿ ಯಾರಾದರೂ ಇರುವ ವಿದ್ಯಾರ್ಥಿಗಳು ಈ ಪರೀಕ್ಷೆ ಬರೆಯದಿರಲು ಅವಕಾಶ ನೀಡಲಾಗಿದ್ದು ಮುಂದೆ ನಡೆಯುವ ಮರು ಪರೀಕ್ಷೆಯಲ್ಲಿ ಇವರ ಮೊದಲು ಪ್ರಯತ್ನ ಎಂದೇ ಪರಿಗಣಿಸಲಾಗುತ್ತದೆ ಎಂದು ತಿಳಿಸಲಾಗಿದೆ.
ಇನ್ನು ಆಂಧ್ರಪ್ರದೇಶದಲ್ಲಿ 8452 ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು 101 ಜನರು ಕೊರೊನಾಗೆ ಬಲಿಯಾಗಿದ್ದಾರೆ. 4111 ಮಂದಿ ಗುಣಮುಖರಾಗಿದ್ದು 4240 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Follow us on Social media