ಬೆಂಗಳೂರು: ಬಿಡಿಎ ಅಧಿಕಾರಿಗಳ ಜೊತೆ ಸೇರಿಕೊಂಡು ಭ್ರಷ್ಟಾಚಾರ, ಅವ್ಯವಹಾರದಲ್ಲಿ ತೊಡಗಿದ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಮಂಗಳವಾರ ಬೆಳ್ಳಂಬೆಳಿಗ್ಗೆ ಬಿಡಿಎ ಮಧ್ಯವರ್ತಿಗಳು, ಏಜೆಂಟ್ ಗಳ ಮನೆಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆಂದು ತಿಳಿದುಬಂದಿದೆ.
ಬೆಂಗಳೂರಿನಲ್ಲಿ ಏಕಕಾಲದಲ್ಲಿ ಎಸಿಬಿ ಎಸ್’ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ 100ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳಿಂದ, 9 ಕಡೆ ದಾಳಿ ಮಾಡಲಾಗಿದೆ.
ಚಾಮರಾಜಪೇಟೆಯ ಬಿ.ಎನ್.ರಘು, ಆರ್’ಟಿ ನಗರ ಬಳಿಯ ಮನೋರಾಯನಪಾಳ್ಯದ ಮೋಹನ್, ದೊಮ್ಮಲೂರಿನ ಮನೋಜ್, ಆರ್.ಆರ್.ನಗರದ ತೇಜು, ಮಲ್ಲತ್ತಹಳ್ಳಿಯ ಮುನಿರತ್ನ ಅಲಿಯಾಸ್ ರತ್ನವೇಲು, ಮುದ್ದಿನಪಾಳ್ಯದ ಅಶ್ವತ್ಥ್ ಹಾಗೂ ಚಿಕ್ಕಹನುಮಯ್ಯ, ಚಾಮುಂಡೇಶ್ವರಿನಗರದ ರಾಮು ಮತ್ತು ಚಾಮುಂಡೇಶ್ವರಿ ನಗರ, ಬಿಡಿಎ ಲೇಔಟ್ನ ಲಕ್ಷ್ಮಣ ಮೇಲೆ ಎಸಿಬಿ ಅಧಿಕಾರಿಗಳಿಂದ ದಾಳಿ ಮಾಡಲಾಗಿದೆ ಎಂದು ವರದಿಗಳಿಂದ ತಿಳಿಸಿವೆ.
ಈ ಹಿಂದೆ ಬಿಡಿಎ ಕಚೇರಿಗಳ ಮೇಲೆ ದಾಳಿಮಾಡಿದ್ದ ಎಸಿಬಿ ಅಧಿಕಾರಿಗಳು, ಹಲವು ಅಕ್ರಮಗಳನ್ನು ಪತ್ತೆಮಾಡಿದ್ದರು. ಆ ಪ್ರಕರಣದ ತನಿಖೆಯಲ್ಲಿ ಖಾಸಗಿ ಮಧ್ಯವರ್ತಿಗಳ ಪಾತ್ರದ ಕುರಿತು ಮಾಹಿತಿ ಲಭ್ಯವಾಗಿತ್ತು. ಅದನ್ನು ಆಧರಿಸಿ ಪ್ರತ್ಯೇಕ ಪ್ರಕರಣ ದಾಖಲಿಸಿರುವ ತನಿಖಾ ಸಂಸ್ಥೆ, ಕಾರ್ಯಾಚರಣೆ ನಡೆಸುತ್ತಿದೆ.
Follow us on Social media