ಬೆಂಗಳೂರು : ರಾಜ್ಯದಲ್ಲಿ ಸರ್ಕಾರದಿಂದ ಸವಲತ್ತು ಪಡೆದುಕೊಂಡ ಬಳಿಕವೂ ತೆರಿಗೆ ನೀಡದ ಸರ್ಕಾರಕ್ಕೆ ಯಾವುದೇ ಆದಾಯ ತರದ ಅನಧಿಕೃತ ಕಟ್ಟಡಗಳನ್ನು ಸಕ್ರಮಗೊಳಿಸಲು ರಾಜ್ಯ ಸರ್ಕಾರಕ್ಕೆ ರಾಜಸ್ವ ಸಂಗ್ರಹ ಮಾಡಲು ಉದ್ದೇಶಿಸಿದೆ.
ಅನಧಿಕೃತ ಬಡಾವಣೆಗಳು ಕಟ್ಟಡಗಳಿಗೆ ಕುಡಿಯುವ ನೀರು, ರಸ್ತೆ, ವಿದ್ಯುತ್ ಸೇರಿದಂತೆ ಹಲವು ಮೂಲಭೂತ ಸೌಲಭ್ಯಗಳನ್ನು ನೀಡಲಾಗಿದ್ದರೂ ಸರ್ಕಾರಕ್ಕೆ ಇವುಗಳಿಂದ ಯಾವುದೇ ತೆರಿಗೆ ಬರುತ್ತಿಲ್ಲವೆನ್ನುವುದನ್ನು ಪರಿಗಣಿಸಿರುವ ಸರ್ಕಾರ, ಇಂತಹ ಅಕ್ರಮ ಕಟ್ಟಡಗಳನ್ನು ಸಕ್ರಮಗೊಳಿಸಿ ಸರ್ಕಾರಕ್ಕೆ ಆದಾಯ ತರುವ ಉದ್ದೇಶವಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಹಳೆಯ ಸಮೀಕ್ಷೆ ಪ್ರಕಾರ ಬೆಂಗಳೂರಿನಲ್ಲಿ ಸುಮಾರು 2.93 ಲಕ್ಷ ಅಕ್ರಮ ಕಟ್ಟಡಗಳಿವೆ. ರಾಜ್ಯದಲ್ಲಿ ಒಟ್ಟು 35 ಲಕ್ಷ ಅಕ್ರಮ ಕಟ್ಟಡಗಳಿದ್ದು ಈಗ ಇವುಗಳ ಸಂಖ್ಯೆ ದುಪ್ಪಟ್ಟಾಗಿರುವ ಸಾಧ್ಯತೆಯೂ ಇದೆ. ಹೀಗಾಗಿ ಇಂತಹ ಅಕ್ರಮ ಕಟ್ಟಡಗಳನ್ನು ಸಕ್ರಮಗೊಳಿಸುವ ನಿಟ್ಟಿನಲ್ಲಿ ಅಕ್ರಮ-ಸಕ್ರಮ ಸಭೆ ನಡೆಸಿದ್ದೇವೆ ಎಂದರು.
ಇತರೆ ರಾಜ್ಯಗಳಲ್ಲಿ ಕೈಗೊಂಡಿರುವ ಕ್ರಮಗಳನ್ನು ಅಧ್ಯಯನ ಮಾಡಿ ನಗರಾಭಿವೃದ್ಧಿ ಇಲಾಖೆ ಹೊಸ ಮಾರ್ಗಸೂಚಿ ಸಿದ್ಧಪಡಿಸುವಂತೆ ಸೂಚಿಸಲಾಗಿದೆ ಎಂದು ಯಡಿಯೂರಪ್ಪ ಹೇಳಿದರು.
