ರಜೌರಿ: ಪಾಕಿಸ್ತಾನ ಸೇನೆ ಮತ್ತೆ ತನ್ನ ಅಪ್ರಚೋದಿತ ಕದನ ವಿರಾಮ ಉಲ್ಲಂಘನೆ ಮುಂದುವರೆಸಿದ್ದು, ಪಾಕಿಸ್ತಾನ ಸೇನೆಯ ಶೆಲ್ ದಾಳಿಗೆ ಭಾರತದ ಓರ್ವ ಯೋಧ ಹುತಾತ್ಮರಾಗಿದ್ದಾರೆ.
ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನ ಪ್ರಾಯೋಜಿತ ಉಗ್ರರ ದಾಳಿ ಮುಂದುವರೆದ ಬೆನ್ನಲ್ಲೇ ಅತ್ತ ಗಡಿಯಲ್ಲಿ ಪಾಕಿಸ್ತಾನಿ ಸೈನಿಕರೂ ಅಪ್ರಚೋದಿತ ಕದನ ವಿರಾಮ ಉಲ್ಲಂಘನೆ ಮಾಡಿ ಭಾರತೀಯ ಪೋಸ್ಟ್ ಗಳತ್ತ ತೀವ್ರ ಗುಂಡಿನ ದಾಳಿ ಮತ್ತು ಶೆಲ್ ದಾಳಿ ನಡೆಸಿದ್ದಾರೆ. ಪಾಕ್ ಸೇನೆಯ ಈ ಶೆಲ್ ದಾಳಿಯಲ್ಲಿ ಭಾರತೀಯ ಸೇನೆಯ ಓರ್ವ ಯೋಧ ಹುತಾತ್ಮರಾಗಿದ್ದು, ಗುರುವಾರ ರಾತ್ರಿ ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಕರ್ತವ್ಯ ನಿರತರಾಗಿದ್ದ ಯೋಧ ಶೆಲ್ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.
ಪಾಕ್ ಸೇನೆಯ ಈ ಉದ್ಧಟತನಕ್ಕೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡುತ್ತಿದ್ದು, ಪಾಕಿಸ್ತಾನದ ಸೇನಾ ಪೋಸ್ಟ್ ಗಳನ್ನು ಗುರಿಯಾಗಿಸಿಕೊಂಡು ತೀವ್ರ ದಾಳಿ ಮಾಡುತ್ತಿದೆ.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರ ಶಿಬಿರಗಳಲ್ಲಿ ಉಗ್ರರು ತುಂಬಿ ಹೋಗಿದ್ದು, ಅವರನ್ನು ಭಾರತದ ಗಡಿಯೊಳಗೆ ನುಸುಳಿಸಲು ಪಾಕ್ ಸೇನೆ ಯತ್ನಿಸುತ್ತಿದೆ. ಇದೇ ಕಾರಣಕ್ಕೆ ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ ಎಂದು ಸೇನಾ ಮುಖ್ಯಸ್ಥರು ಈ ಹಿಂದೆ ಹೇಳಿದ್ದರು.
Follow us on Social media