ಬೆಂಗಳೂರು: ಅಡಿಕೆ ಹಾನಿಕರ, ಅದನ್ನು ನಿಷೇಧ ಮಾಡಬೇಕೆಂದು ಇತ್ತೀಚೆಗೆ ಲೋಕಸಭಾ ಸದಸ್ಯರು ಹೇಳಿದ್ದು ಭಾರೀ ದೊಡ್ಡ ಮಟ್ಟದಲ್ಲಿ ಸದ್ದಾಗುತ್ತಿದೆ. ಆಮೇಲೆ ಸಚಿವರೊಬ್ಬರು ಕೂಡ ಹೇಳಿದರು. ಈ ಹಿನ್ನೆಲೆಯಲ್ಲಿ ರಾಜ್ಯದ ಅಡಿಕೆ ಕಾರ್ಯಪಡೆ ಮೊನ್ನೆ ದೆಹಲಿಗೆ ನಿಯೋಗ ಹೋಗಿ ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಿ ಅಡಿಕೆ ಬಗ್ಗೆ ನ್ಯಾಯಾಲಯದಲ್ಲಿ ತೀರ್ಮಾನವಾಗದೆ ಹೇಳಿಕೆಗಳನ್ನು ನೀಡಬಾರದು ಎಂದು ಒತ್ತಾಯಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಈ ಕುರಿತು ಮಾತನಾಡಿದ ಅವರು ಸರ್ಕಾರದಿಂದ ವಿಶೇಷವಾಗಿ ಹೋರಾಟ ಮಾಡಿ ರೈತರ ಹಿತ ಕಾಯುತ್ತೇವೆ, ಯಾರೂ ಅಡಕೆ ಕುರಿತು ಇಲ್ಲ ಸಲ್ಲದ ಹೇಳಿಕೆ ನೀಡಬಾರದು. ಇದರಿಂದ ಅಡಿಕೆ ಬೆಳೆಗಾರರಿಗೆ ತೊಂದರೆಯಾಗಲಿದೆ. ಅಡಿಕೆ ಮಾರುಕಟ್ಟೆಯಲ್ಲಿ ಬೆಲೆ ವ್ಯತ್ಯಾಸವಾಗಲಿದೆ. ಅಡಿಕೆ ಬೆಳೆಗಾರರು, ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಅಡಕೆ ಬೆಳೆಗಾರರ ಹಿತ ಕಾಯಲು ಸರ್ಕಾರ ಬದ್ಧವಾಗಿದೆ ಎಂದರು.
ಅಡಿಕೆ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ಹಿಂದಿನ ಕಾಂಗ್ರೆಸ್ ಸರ್ಕಾರ ಹಾನಿಕಾರಕ ಎಂದು ಅರ್ಜಿ ಹಾಕಿತ್ತೋ ಆ ಅಫಿಡವಿಟ್ಟು ತೆಗೆಯಲು ಕರ್ನಾಟಕ ರಾಜ್ಯದಲ್ಲಿ ಪ್ರಯತ್ನ ಮಾಡುತ್ತಿದ್ದೇವೆ. ಅಡಿಕೆ ಮನುಷ್ಯನ ದೇಹಕ್ಕೆ ಹಾನಿಕಾರಕ ಅಲ್ಲ ಎಂದು ಸಾಬೀತುಪಡಿಸಲು ಕರ್ನಾಟಕದಲ್ಲಿ ಸಂಶೋಧನೆ ಮಾಡುತ್ತಿದ್ದೇವೆ. ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಮೂಲಕ ನಮ್ಮ ಕಾರ್ಯಪಡೆಯಿಂದ ಸಂಶೋಧನೆಯಾಗುತ್ತಿದೆ. ಕೇಂದ್ರದಲ್ಲಿ ಒಂದು ಸಮಿತಿಯನ್ನು ರಚಿಸಲಾಗುತ್ತಿದೆ. ಅಡಿಕೆ ಬೆಳೆ ಬಗ್ಗೆ ಅಧ್ಯಯನ ಮಾಡಿ ಕೇಂದ್ರ ಮತ್ತು ಸುಪ್ರೀಂ ಕೋರ್ಟ್ ಗೆ ಅದು ವರದಿ ಸಲ್ಲಿಸಲಿದೆ ಎಂದು ವಿವರಿಸಿದರು.
ದೇಶದಲ್ಲಿ ಕರ್ನಾಟಕ ವಿಶೇಷವಾಗಿ ಅಡಿಕೆ ಬೆಳೆಯುವ ರಾಜ್ಯವಿದು. ಹಾಗಾಗಿ ಇದರ ಬಗ್ಗೆ ವಿಶೇಷ ಹೋರಾಟ ಮಾಡುತ್ತಿದ್ದು, ಕೇಂದ್ರ ಸರ್ಕಾರ ನಮಗೆ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ಹೇಳಿದರು.
Follow us on Social media